ಆಗಸ್ಟ್ 16ರೊಳಗೆ LPG ಇ-ಕೆವೈಸಿ ಕಡ್ಡಾಯ: ಸಬ್ಸಿಡಿ ಪಡೆಯಲು ಗ್ರಾಹಕರಿಗೆ ಸೂಚನೆ

ನವದೆಹಲಿ: ದೇಶದ ತೈಲ ಮಾರುಕಟ್ಟೆ ಕಂಪೆನಿಗಳು (OMCs) ಗೃಹ ಬಳಕೆಯ LPG ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ್ದು, ಆಗಸ್ಟ್ 16ರೊಳಗೆ ಇ-ಕೆವೈಸಿ (E-KYC) ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ತಿಳಿಸಿವೆ. ಕೇಂದ್ರ ಸರ್ಕಾರದಿಂದ ಸಿಗುವ LPG ಸಬ್ಸಿಡಿಯನ್ನು ಮುಂದುವರಿಸಿಕೊಂಡು ಹೋಗಲು ಈ ಪ್ರಕ್ರಿಯೆ ಅವಶ್ಯಕ ಎಂದು ತಿಳಿಸಲಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಭಾರತ್ ಗ್ಯಾಸ್ ಹಾಗೂ ಹಿಂದೂಸ್ಥಾನ್ ಪೆಟ್ರೋಲಿಯಂ ಸಂಸ್ಥೆಗಳು ಈಗಾಗಲೇ ತಮ್ಮ ಗ್ರಾಹಕರಿಗೆ SMS ಹಾಗೂ ಇತರೆ ಮಾಧ್ಯಮಗಳ ಮೂಲಕ ಮಾಹಿತಿ ನೀಡಿವೆ. ನಿಗದಿತ ದಿನಾಂಕದೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದಲ್ಲಿ LPG ಸಂಪರ್ಕವನ್ನು ರದ್ದುಪಡಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಗ್ರಾಹಕರ ಮಾಹಿತಿಯನ್ನು ಪರಿಶೀಲಿಸುವುದು, ದಾಖಲೆಗಳನ್ನು ನವೀಕರಿಸುವುದು ಹಾಗೂ ನಿಜವಾದ ಫಲಾನುಭವಿಗಳನ್ನು ಗುರುತಿಸುವುದು ಈ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿದೆ. ಇದೇ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಹಾಗೂ ಗ್ಯಾಸ್ ವಿತರಕರು ಪ್ರತಿಯೊಬ್ಬ LPG ಬಳಕೆದಾರರು ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.
ಗಮನಾರ್ಹವಾಗಿ, IOCL ಮೊದಲು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಗಡುವು ನೀಡಿದ್ದರೂ, ಗ್ರಾಹಕರ ಅನುಕೂಲಕ್ಕಾಗಿ ಅದನ್ನು ಆಗಸ್ಟ್ 16ರವರೆಗೆ ವಿಸ್ತರಿಸಲಾಗಿದೆ.
ಇ-ಕೆವೈಸಿ ಹೇಗೆ ಮಾಡುವುದು? ಗ್ರಾಹಕರು ತಮ್ಮ ಸಮೀಪದ LPG ಡಿಸ್ಟ್ರಿಬ್ಯೂಟರ್ ಬಳಿ ಆಧಾರ್ ಕಾರ್ಡ್ ಹಾಗೂ ಸಂಪರ್ಕ ವಿವರಗಳೊಂದಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ OTP ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು. ಕೆಲವೊಂದು ಕಂಪನಿಗಳು ಆನ್‌ಲೈನ್ ಹಾಗೂ ಮೊಬೈಲ್ ಆಪ್ ಮೂಲಕವೂ ಈ ಸೌಲಭ್ಯ ಒದಗಿಸಿವೆ.
ಎಲ್ಲಿ ಮಾಡಿಸಬಹುದು?
ಸಮೀಪದ ಗ್ಯಾಸ್ ಏಜೆನ್ಸಿ
ಅಧಿಕೃತ ಮೊಬೈಲ್ ಆಪ್ / ವೆಬ್‌ಸೈಟ್
ಅನುಮೋದಿತ ಸೇವಾ ಕೇಂದ್ರಗಳು
ಆದ್ದರಿಂದ LPG ಗ್ರಾಹಕರು ಯಾವುದೇ ತೊಂದರೆ ತಪ್ಪಿಸಲು ಆಗಸ್ಟ್ 16ರೊಳಗೆ ಇ-ಕೆವೈಸಿ ಪೂರ್ಣಗೊಳಿಸುವುದು ಅತ್ಯಂತ ಅಗತ್ಯವಾಗಿದೆ.







Comments