ಮಧ್ಯಪ್ರಾಚ್ಯ ಸಂಘರ್ಷದ ಎಫೆಕ್ಟ್: ವಾಣಿಜ್ಯ ಸಿಲಿಂಡರ್ ರಿಯಾಯಿತಿ ರದ್ದುಗೊಳಿಸಿದ ಇಂಡಿಯನ್ ಆಯಿಲ್!
- Mar 5
- 1 min read

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ಮತ್ತು ರಾಜಕೀಯ ಉದ್ವಿಗ್ನತೆಯು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಇದರಿಂದಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ನೀಡುತ್ತಿದ್ದ ಎಲ್ಲಾ ರಿಯಾಯಿತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿರುವುದಾಗಿ ಘೋಷಿಸಿದೆ. ಈ ನಿರ್ಧಾರವು ಸಗಟು ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆಗೆ ಪರೋಕ್ಷವಾಗಿ ಕಾರಣವಾಗಲಿದೆ.
ಇಂಡೇನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ನೀಡಿರುವ ಮಾಹಿತಿಯಂತೆ, 19 ಕೆಜಿ ಮತ್ತು 47.5 ಕೆಜಿ ತೂಕದ ವಾಣಿಜ್ಯ ಸಿಲಿಂಡರ್‌ಗಳಿಗೆ ಈವರೆಗೆ ವಿಸ್ತರಿಸಲಾಗಿದ್ದ ರಿಯಾಯಿತಿಗಳನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ. ಸದ್ಯ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,814 ರೂಪಾಯಿ ಹಾಗೂ 47.5 ಕೆಜಿ ಸಿಲಿಂಡರ್ ಬೆಲೆ 4,532 ರೂಪಾಯಿಗಳಷ್ಟಿದೆ. ರಿಯಾಯಿತಿಗಳ ಕಡಿತದಿಂದಾಗಿ ಗ್ರಾಹಕರು ಈಗ ಪೂರ್ಣ ಮಾರುಕಟ್ಟೆ ದರವನ್ನು ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕಂಪನಿಯ ಈ ಹಠಾತ್ ನಿರ್ಧಾರದಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಣ್ಣ ಕೈಗಾರಿಕೆಗಳಂತಹ ವಾಣಿಜ್ಯ ಬಳಕೆದಾರರಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ರಿಯಾಯಿತಿ ಸ್ಥಗಿತದಿಂದಾಗಿ ಕಾರ್ಯಾಚರಣೆಯ ವೆಚ್ಚ ಹೆಚ್ಚಾಗಲಿದ್ದು, ಇದು ಸಾರ್ವಜನಿಕರಿಗೆ ಹೋಟೆಲ್ ಆಹಾರ ಮತ್ತು ಇತರ ಸೇವೆಗಳ ಬೆಲೆ ಏರಿಕೆಯ ರೂಪದಲ್ಲಿ ತಟ್ಟಬಹುದು. ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ತಿಳಿಯಾಗುವವರೆಗೆ ಈ ಬೆಲೆ ಏರಿಕೆಯ ಒತ್ತಡ ಮುಂದುವರಿಯುವ ಲಕ್ಷಣಗಳು ಕಾಣುತ್ತಿವೆ.







Comments