ಎಲ್‌ಪಿಜಿ ಸಿಲಿಂಡರ್ ಕೊರತೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ
- Mar 10
- 1 min read

ದೇಶದ ಹಲವೆಡೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಎದುರಾಗಿದ್ದು, ಜನಸಾಮಾನ್ಯರು ಆತಂಕಗೊಂಡಿದ್ದಾರೆ. ಗಲ್ಫ್ ರಾಷ್ಟ್ರಗಳಿಂದ ಪೂರೈಕೆ ವ್ಯತ್ಯಯವಾಗಿರುವುದರಿಂದ ಕಾಳಸಂತೆಯಲ್ಲಿ ಸಿಲಿಂಡರ್ ಬೆಲೆ 1,500 ರೂಪಾಯಿವರೆಗೆ ಏರಿಕೆಯಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ತಕ್ಷಣವೇ ಉತ್ಪಾದನೆ ಹೆಚ್ಚಿಸುವಂತೆ ತೈಲ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ದಾಸ್ತಾನು ಮತ್ತು ಕಾಳಸಂತೆ ಮಾರಾಟ ತಡೆಯಲು ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಏರಿಸಲಾಗಿದೆ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆಯ ಮೇಲೆ ಅನಿಲ ಪೂರೈಸಲು ಪೆಟ್ರೋಲಿಯಂ ಇಲಾಖೆ ನಿರ್ಧರಿಸಿದೆ.

ಗೃಹಬಳಕೆಯ ಸಿಲಿಂಡರ್‌ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಈ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡದಂತೆ ಮನವಿ ಮಾಡಿದೆ.
ಹೋಟೆಲ್, ರೆಸ್ಟೋರೆಂಟ್ ಮತ್ತು ಕೈಗಾರಿಕೆಗಳ ಎಲ್‌ಪಿಜಿ ಬೇಡಿಕೆಯನ್ನು ಪರಿಶೀಲಿಸಲು ಮೂವರು ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ವಾಣಿಜ್ಯ ಬಳಕೆಯ ಪೂರೈಕೆಯ ಮೇಲೆ ನಿಗಾ ಇಡಲಿದೆ ಎಂದು ಪೆಟ್ರೋಲಿಯಂ ಇಲಾಖೆ ಟ್ವಿಟರ್ ಮೂಲಕ ತಿಳಿಸಿದೆ. ಪೂರೈಕೆ ಸುಗಮಗೊಳಿಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದು, ಶೀಘ್ರವೇ ಪರಿಸ್ಥಿತಿ ತಿಳಿಯಾಗುವ ನಿರೀಕ್ಷೆಯಿದೆ.







Comments