ಬೆಳಗಾವಿ: ಪ್ರೇಮದ ಹೆಸರಲ್ಲಿ ಯುವತಿಗೆ ನಂಬಿಕೆ ದ್ರೋಹ; ವಿಡಿಯೋ ಹರಿಬಿಡುವುದಾಗಿ ಬೆದರಿಸಿ ಲಕ್ಷಾಂತರ ಹಣ ದೋಚಿದ ಕಿರಾತಕ - ತನಿಖೆಯಲ್ಲಿ ಪೊಲೀಸರ ಶಾಮೀಲು ಶಂಕೆ!"
- Apr 6
- 1 min read

ಬೆಳಗಾವಿ: ನಗರದ ಶಾಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೇಮ, ಮದುವೆ ಹೆಸರಿನಲ್ಲಿ ಯುವತಿಯನ್ನು ಮೋಸಗೊಳಿಸಿ, ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಹಣ ಹಾಗೂ ಚಿನ್ನ ದೋಚಿದ ಆರೋಪದ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯನ್ನು ಇಶ್ವರ ಸಿಂಗ್ ಪ್ರೇಮ್ ಸಿಂಗ್ ಬದ್ಗುಜರ್ ಎಂದು ಗುರುತಿಸಲಾಗಿದ್ದು, ಇವನು ಬೆಳಗಾವಿಯ ಮಾಧವ ಕಾಲೋನಿ ನಿವಾಸಿ ಎಂದು ತಿಳಿದುಬಂದಿದೆ. ಫೇಸ್ಬುಕ್ ಮೂಲಕ ಪರಿಚಯವಾದ ಯುವತಿಯೊಂದಿಗೆ ಆತ ಪ್ರೇಮ ಸಂಬಂಧ ಬೆಳೆಸಿ, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.
ದೂರುದಾರೆಯ ಪ್ರಕಾರ, ಆಕೆಯ ಅನುಮತಿ ಇಲ್ಲದೇ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ. ನಂತರ ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸಿ, ಹಣ ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಸುಮಾರು 150 ಗ್ರಾಂ ಚಿನ್ನಾಭರಣ ಮತ್ತು ₹19 ಲಕ್ಷ ಹಣವನ್ನು, ಡಿಜಿಟಲ್ ಪಾವತಿ ಮಾರ್ಗಗಳ ಮೂಲಕವೂ ಸೇರಿ ದೋಚಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇದಲ್ಲದೆ, ಮದುವೆಗೆ ₹3 ಕೋಟಿ ಹಣ ನೀಡಬೇಕೆಂದು ಆರೋಪಿಯ ತಾಯಿ ಬೇಡಿಕೆ ಇಟ್ಟಿದ್ದಾಳೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಶಾಹಾಪುರ ಪೊಲೀಸರ ಪಾತ್ರದ ಮೇಲೂ ಯುವತಿ ಅನುಮಾನ ವ್ಯಕ್ತಪಡಿಸಿದ್ದು, ವಶಪಡಿಸಿಕೊಂಡ ಚಿನ್ನವನ್ನು ಮತ್ತೆ ಆರೋಪಿಗೆ ಹಿಂತಿರುಗಿಸಲಾಗಿದೆ ಎಂದು ಆರೋಪಿಸಿದ್ದಾಳೆ. ಕೆಲ ಅಧಿಕಾರಿಗಳ ಜೊತೆ ಸಂಧಿ ನಡೆದಿರುವ ಸಾಧ್ಯತೆಗಳನ್ನೂ ಆಕೆ ಉಲ್ಲೇಖಿಸಿದ್ದಾಳೆ.
ನ್ಯಾಯ ಮತ್ತು ರಕ್ಷಣೆ ಕೋರಿ ಯುವತಿ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಭಾವೋದ್ರಿಕ್ತ ಮನವಿ ಮಾಡಿಕೊಂಡಿದ್ದಾಳೆ.







Comments