ನ್ಯಾಯಾಲಯದ ಮೆಟ್ಟಿಲೇರದೆ ವಿವಾದಗಳಿಗೆ ಪರಿಹಾರ: ಲೋಕ್ ಅದಾಲತ್ ಹೇಗೆ ಕೆಲಸ ಮಾಡುತ್ತದೆ?

ನ್ಯಾಯಾಲಯದ ಮೆಟ್ಟಿಲೇರುವ ಮೊದಲು ಅಥವಾ ನಂತರ ಉಂಟಾಗುವ ಸಣ್ಣ ಪ್ರಮಾಣದ ನ್ಯಾಯಿಕ ವಿವಾದಗಳಿಗೆ ಪರಿಹಾರ ನೀಡುವ ಜನಸ್ನೇಹಿ ವ್ಯವಸ್ಥೆಯೇ ಲೋಕ್ ಅದಾಲತ್.
ನ್ಯಾಯ ಎನ್ನುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಆದರೆ ನ್ಯಾಯಾಲಯದ ಪ್ರಕ್ರಿಯೆ ದೀರ್ಘವಾಗುವುದು, ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದು, ಸಮಯ ಮತ್ತು ಹಣದ ಖರ್ಚು ಹೆಚ್ಚಾಗುವುದು ಸಾಮಾನ್ಯ ಜನರಿಗೆ ನ್ಯಾಯ ಪಡೆಯುವುದನ್ನು ಕೆಲವೊಮ್ಮೆ ಕಷ್ಟಕರವಾಗಿಸುತ್ತದೆ. ಇಂತಹ ಸಂದರ್ಭದಲ್ಲಿ ಜನರಿಗೆ ಸರಳವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ವೇಗವಾಗಿ ವಿವಾದಗಳನ್ನು ಪರಿಹರಿಸಿಕೊಳ್ಳಲು ನೆರವಾಗುವ ಪ್ರಮುಖ ವ್ಯವಸ್ಥೆಯೇ ಲೋಕ್ ಅದಾಲತ್.
‘ಲೋಕ್ ಅದಾಲತ್’ ಎಂದರೆ ಜನರ ನ್ಯಾಯಾಲಯ. ಇದು ಸಾಂಪ್ರದಾಯಿಕ ನ್ಯಾಯಾಲಯಕ್ಕೆ ಪರ್ಯಾಯವಾಗಿ ಕಾರ್ಯನಿರ್ವಹಿಸುವ ಒಂದು ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆ. ಇಲ್ಲಿ ಪ್ರಕರಣವನ್ನು ಗೆಲ್ಲುವುದು ಅಥವಾ ಸೋಲುವುದು ಮುಖ್ಯವಲ್ಲ. ಬದಲಾಗಿ, ಎರಡೂ ಪಕ್ಷಗಳ ಒಪ್ಪಿಗೆಯೊಂದಿಗೆ ವಿವಾದಕ್ಕೆ ನ್ಯಾಯಯುತ ಪರಿಹಾರ ಕಂಡುಕೊಳ್ಳುವುದು ಮುಖ್ಯ ಉದ್ದೇಶವಾಗಿದೆ.
ಐತಿಹಾಸಿಕ ಹಿನ್ನೆಲೆ
ಭಾರತದಲ್ಲಿ ಬ್ರಿಟಿಷರ ಆಡಳಿತದ ಅವಧಿಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳು ನಡೆದವು. ಈಸ್ಟ್ ಇಂಡಿಯಾ ಕಂಪನಿಯ ಕಾಲದಿಂದಲೇ ತೆರಿಗೆ ಮತ್ತು ಇತರ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು ವಿವಿಧ ನ್ಯಾಯಾಂಗ ವ್ಯವಸ್ಥೆಗಳು ಬಳಸಲ್ಪಟ್ಟವು. ನಂತರ ವಾರನ್ ಹೆಸ್ಟಿಂಗ್ಸ್ ಅವರ ಕಾಲದಲ್ಲಿ 1772ರ ನ್ಯಾಯಾಂಗ ಸುಧಾರಣೆಗಳ ಮೂಲಕ ನಾಗರಿಕ ಮತ್ತು ಕ್ರಿಮಿನಲ್ ಪ್ರಕರಣಗಳ ನಿರ್ವಹಣೆಗೆ ವ್ಯವಸ್ಥಿತ ರೂಪ ನೀಡುವ ಪ್ರಯತ್ನ ನಡೆಯಿತು.
ಸ್ವಾತಂತ್ರ್ಯಾನಂತರವೂ ನ್ಯಾಯವನ್ನು ಸಾಮಾನ್ಯ ಜನರಿಗೆ ಸುಲಭವಾಗಿ ತಲುಪಿಸುವ ಅಗತ್ಯ ಮುಂದುವರಿಯಿತು. ಸಂವಿಧಾನದ ಅನುಚ್ಛೇದ 39A ಆರ್ಥಿಕ ಅಥವಾ ಇತರ ಅಸಮರ್ಥತೆಯಿಂದಾಗಿ ಯಾವುದೇ ವ್ಯಕ್ತಿ ನ್ಯಾಯದಿಂದ ವಂಚಿತರಾಗದಂತೆ ಉಚಿತ ಕಾನೂನು ನೆರವು ಒದಗಿಸುವ ತತ್ವವನ್ನು ಪ್ರತಿಪಾದಿಸುತ್ತದೆ. ಇದರ ಮುಂದುವರಿದ ಭಾಗವಾಗಿ ಕಾನೂನು ಸೇವಾ ಪ್ರಾಧಿಕಾರಗಳ ವ್ಯವಸ್ಥೆ ಬಲಗೊಂಡಿತು. Legal Services Authorities Act, 1987ರ ಮೂಲಕ ಲೋಕ್ ಅದಾಲತ್ಗೆ ಕಾನೂನುಬದ್ಧ ನೆಲೆ ದೊರೆಯಿತು.
ಲೋಕ್ ಅದಾಲತ್ನ ವಿಧಗಳು
ಸಾಮಾನ್ಯ ಲೋಕ್ ಅದಾಲತ್ (Regular Lok Adalat)
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ರಾಜಿ ಮೂಲಕ ಇತ್ಯರ್ಥಪಡಿಸಬಹುದಾದ ಪ್ರಕರಣಗಳನ್ನು ನ್ಯಾಯಾಲಯದ ಅಭಿಪ್ರಾಯದ ಮೇರೆಗೆ ಸಂಧಾನ ಕೇಂದ್ರಕ್ಕೆ ಕಳುಹಿಸಬಹುದು. ನಿಗದಿತ ದಿನದಂದು ಎರಡೂ ಪಕ್ಷಗಾರರನ್ನು ಕರೆಸಿ ಮಾತುಕತೆ ಮತ್ತು ಸಂಧಾನದ ಮೂಲಕ ಒಪ್ಪಿಗೆ ದೊರೆತಲ್ಲಿ, ಕಾನೂನು ಸೇವಾ ಪ್ರಾಧಿಕಾರದ ಮೂಲಕ ಲೋಕ್ ಅದಾಲತ್ನಲ್ಲಿ ರಾಜಿ ಅರ್ಜಿಯ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಬಹುದು. ಒಪ್ಪಂದವಾಗದಿದ್ದರೆ ಪ್ರಕರಣವು ಸಾಮಾನ್ಯ ರೀತಿಯಲ್ಲಿ ಮುಂದುವರಿಯುತ್ತದೆ.
ಶಾಶ್ವತ ಲೋಕ್ ಅದಾಲತ್ (Permanent Lok Adalat)
ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ಕೆಲವು ವಿವಾದಗಳನ್ನು ಶಾಶ್ವತ ಲೋಕ್ ಅದಾಲತ್ ಮೂಲಕ ಪರಿಹರಿಸಬಹುದು. ಉದಾಹರಣೆಗೆ, ಬ್ಯಾಂಕ್, ಸಾರಿಗೆ, ಅಂಚೆ ಸೇವೆ, ವಿದ್ಯುತ್, ನೀರು ಮತ್ತು ಇತರ ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ಕೆಲವು ವಿವಾದಗಳು ಈ ವ್ಯವಸ್ಥೆಯ ವ್ಯಾಪ್ತಿಗೆ ಬರಬಹುದು.
ಮಾತುಕತೆಯ ಮೂಲಕ ಪರಿಹಾರ
ಸಾಮಾನ್ಯವಾಗಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ, ಸಾಕ್ಷ್ಯ, ದಾಖಲೆಗಳು, ವಾದ-ಪ್ರತಿವಾದ ಮತ್ತು ಇತರ ಕಾನೂನು ಪ್ರಕ್ರಿಯೆಗಳು ನಡೆಯುತ್ತವೆ. ಆದರೆ ಲೋಕ್ ಅದಾಲತ್ನಲ್ಲಿ ಪಕ್ಷಗಾರರನ್ನು ಪರಸ್ಪರ ಮಾತುಕತೆ ಮತ್ತು ಸಂಧಾನದ ಮೂಲಕ ಪರಿಹಾರದತ್ತ ಕೊಂಡೊಯ್ಯಲು ಪ್ರಯತ್ನಿಸಲಾಗುತ್ತದೆ.
ಇಲ್ಲಿ ಯಾವುದೇ ಪಕ್ಷಗಾರನ ಮೇಲೆ ಅನಗತ್ಯ ಒತ್ತಡ ಹೇರುವುದಕ್ಕಿಂತ, ಪ್ರಕರಣದ ಸ್ವರೂಪವನ್ನು ಅರ್ಥಮಾಡಿಕೊಂಡು ಎರಡೂ ಪಕ್ಷಗಳು ಒಪ್ಪಿಕೊಳ್ಳಬಹುದಾದ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಆದ್ಯತೆ ನೀಡಲಾಗುತ್ತದೆ.
ಲೋಕ್ ಅದಾಲತ್ನಲ್ಲಿ ರಾಜಿ ಮಾಡಿಕೊಳ್ಳಬಹುದಾದ ನಾಗರಿಕ ಪ್ರಕರಣಗಳು, ಕುಟುಂಬ ಮತ್ತು ವೈವಾಹಿಕ ವಿವಾದಗಳು, ಹಣಕಾಸು ಮತ್ತು ಬ್ಯಾಂಕಿಂಗ್ ಸಂಬಂಧಿತ ಕೆಲವು ಪ್ರಕರಣಗಳು, ಚೆಕ್ ಪ್ರಕರಣಗಳು, ಕಾರ್ಮಿಕ ವಿವಾದಗಳು ಹಾಗೂ ಕಾನೂನಿನ ಪ್ರಕಾರ ರಾಜಿ ಮಾಡಿಕೊಳ್ಳಬಹುದಾದ ಕೆಲವು ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅವಕಾಶವಿದೆ. ಆದರೆ ಗಂಭೀರ ಹಾಗೂ ರಾಜಿ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲದ ಅಪರಾಧ ಪ್ರಕರಣಗಳನ್ನು ಈ ವ್ಯವಸ್ಥೆಯ ಮೂಲಕ ಇತ್ಯರ್ಥಪಡಿಸಲು ಸಾಧ್ಯವಿಲ್ಲ.
ಅಂತಿಮ ಮತ್ತು ಬಾಧ್ಯಕರ ತೀರ್ಪು
ಲೋಕ್ ಅದಾಲತ್ನಲ್ಲಿ ಎರಡೂ ಪಕ್ಷಗಳು ಒಪ್ಪಿಕೊಂಡು ಪ್ರಕರಣವನ್ನು ಇತ್ಯರ್ಥಪಡಿಸಿದ ನಂತರ ನೀಡಲಾಗುವ ಅವಾರ್ಡ್ಗೆ ವಿಶೇಷ ಮಹತ್ವವಿದೆ. ಅದು ಅಂತಿಮ ಮತ್ತು ಬಾಧ್ಯಕರ ಸ್ವರೂಪ ಹೊಂದಿದ್ದು, ಸಿವಿಲ್ ನ್ಯಾಯಾಲಯದ ಡಿಕ್ರಿಯಂತೆಯೇ ಜಾರಿಗೊಳಿಸಬಹುದಾಗಿದೆ.
ಇದರಿಂದ ವರ್ಷಗಳ ಕಾಲ ನ್ಯಾಯಾಲಯದಲ್ಲಿ ನಡೆಯಬಹುದಾದ ಕೆಲವು ವಿವಾದಗಳಿಗೆ ಕಡಿಮೆ ಅವಧಿಯಲ್ಲಿ ಅಂತ್ಯ ಕಂಡುಕೊಳ್ಳುವ ಅವಕಾಶ ಸಿಗುತ್ತದೆ.
ಜನರಿಗೆ ಏನು ಪ್ರಯೋಜನ?
ಲೋಕ್ ಅದಾಲತ್ನ ದೊಡ್ಡ ಪ್ರಯೋಜನವೆಂದರೆ ನ್ಯಾಯಕ್ಕೆ ಪ್ರವೇಶವನ್ನು ಸುಲಭಗೊಳಿಸುವುದು. ಪ್ರಕರಣಗಳನ್ನು ವೇಗವಾಗಿ ಪರಿಹರಿಸುವುದರಿಂದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದರಿಂದ ನ್ಯಾಯಾಲಯವು ಹೆಚ್ಚು ಗಂಭೀರ ಪ್ರಕರಣಗಳ ಕಡೆಗೆ ಗಮನಹರಿಸಲು ಸಹಕಾರಿಯಾಗುತ್ತದೆ.
ಕಡಿಮೆ ವೆಚ್ಚದಲ್ಲಿ ವಿವಾದ ಪರಿಹಾರ, ಜನಸ್ನೇಹಿ ವಾತಾವರಣ, ಮಾತುಕತೆಯ ಮೂಲಕ ಪರಿಹಾರ ಮತ್ತು ಪ್ರಕರಣವನ್ನು ಅಂತಿಮವಾಗಿ ಮುಗಿಸಿಕೊಳ್ಳುವ ಅವಕಾಶವೂ ಇದರ ಪ್ರಮುಖ ಪ್ರಯೋಜನಗಳಾಗಿವೆ.
ಆರ್ಥಿಕವಾಗಿ ದುರ್ಬಲರಾಗಿರುವ ಅರ್ಹ ವ್ಯಕ್ತಿಗಳಿಗೆ ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ಉಚಿತ ಕಾನೂನು ನೆರವು ಮತ್ತು ಅಗತ್ಯವಿದ್ದಲ್ಲಿ ವಕೀಲರ ಸಹಾಯವೂ ದೊರೆಯುತ್ತದೆ. ಅರ್ಹತೆ ಮತ್ತು ಆದಾಯ ಮಿತಿಗೆ ಸಂಬಂಧಿಸಿದ ನಿಯಮಗಳು ಅನ್ವಯಿಸುತ್ತವೆ. ಮಹಿಳೆಯರಿಗೆ ಕಾನೂನು ನೆರವಿನ ವಿಶೇಷ ಸೌಲಭ್ಯಗಳೂ ಇವೆ.
ಕಾನೂನು ನೆರವು ಪಡೆಯಲು ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಒದಗಿಸಬೇಕಾಗಬಹುದು. ಪ್ರಕರಣಕ್ಕೆ ಸಂಬಂಧಿಸಿದ ನಿಖರ ಮಾಹಿತಿಗಾಗಿ ಹತ್ತಿರದ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸುವುದು ಸೂಕ್ತ.
ದುಷ್ಪರಿಣಾಮಗಳಿರಬಹುದೇ?
ಲೋಕ್ ಅದಾಲತ್ ವ್ಯವಸ್ಥೆ ಹಲವು ಪ್ರಯೋಜನಗಳನ್ನು ಹೊಂದಿದ್ದರೂ, ಅದರ ಕಾರ್ಯವೈಖರಿಯಲ್ಲಿ ಕೆಲವು ಸವಾಲುಗಳಿವೆ. ಪಕ್ಷಗಾರರಲ್ಲಿ ಒಬ್ಬರು ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ದುರ್ಬಲರಾಗಿದ್ದರೆ, ಸಂಧಾನದ ಸಂದರ್ಭದಲ್ಲಿ ಅವರ ಮೇಲೆ ಪರೋಕ್ಷ ಒತ್ತಡ ಉಂಟಾಗುವ ಸಾಧ್ಯತೆಯನ್ನು ನಿರ್ಲಕ್ಷಿಸಲಾಗದು.
ಅದೇ ರೀತಿ, ಲೋಕ್ ಅದಾಲತ್ನ ಸ್ವರೂಪ, ತಮ್ಮ ಕಾನೂನು ಹಕ್ಕುಗಳು ಅಥವಾ ಪ್ರಕರಣದ ನಿಜವಾದ ಮೌಲ್ಯದ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲದಿದ್ದರೆ, ಕೆಲವರು ತಮ್ಮ ಹಕ್ಕಿಗೆ ತಕ್ಕ ಪರಿಹಾರಕ್ಕಿಂತ ಕಡಿಮೆ ಮೊತ್ತಕ್ಕೆ ಒಪ್ಪಿಕೊಳ್ಳುವ ಸಾಧ್ಯತೆಯೂ ಇದೆ.
ವಿಶೇಷವಾಗಿ ವಿಮೆ ಅಥವಾ ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ, ಪ್ರಕರಣವನ್ನು ತ್ವರಿತವಾಗಿ ಮುಗಿಸುವ ಉದ್ದೇಶವೇ ಮುಖ್ಯವಾದರೆ, ನ್ಯಾಯಯುತ ಪರಿಹಾರದ ಪ್ರಶ್ನೆ ಹಿಂದೆ ಸರಿಯುವ ಅಪಾಯವಿದೆ.
ಹೀಗಾಗಿ ಲೋಕ್ ಅದಾಲತ್ನ ಯಶಸ್ಸನ್ನು ಕೇವಲ “ಎಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ?” ಎಂಬ ಸಂಖ್ಯೆಯಿಂದ ಅಳೆಯಬಾರದು. “ಎಷ್ಟು ಪ್ರಕರಣಗಳಲ್ಲಿ ನ್ಯಾಯಯುತ ಮತ್ತು ಸ್ವಯಂಪ್ರೇರಿತ ಪರಿಹಾರ ದೊರೆಯಿತು?” ಎಂಬುದೇ ಮುಖ್ಯ ಪ್ರಶ್ನೆಯಾಗಬೇಕು.
ಕೆಲವು ಬದಲಾವಣೆಗಳ ಅಗತ್ಯವಿದೆಯೇ?
ಲೋಕ್ ಅದಾಲತ್ ಇನ್ನಷ್ಟು ಪರಿಣಾಮಕಾರಿಯಾಗಲು ಹಲವು ಸುಧಾರಣೆಗಳ ಅಗತ್ಯವಿದೆ. ಪ್ರಕರಣವನ್ನು ಲೋಕ್ ಅದಾಲತ್ಗೆ ಕಳುಹಿಸುವ ಮೊದಲು ಪಕ್ಷಗಾರರಿಗೆ ಅದರ ಸ್ವರೂಪ, ತಮ್ಮ ಹಕ್ಕುಗಳು, ಸಂಧಾನದ ಪರಿಣಾಮ ಮತ್ತು ಅವಾರ್ಡ್ನ ಅಂತಿಮ ಸ್ವರೂಪದ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು.
ವಕೀಲರು, ಕಾನೂನು ಸೇವಾ ಪ್ರಾಧಿಕಾರಗಳ ಸಿಬ್ಬಂದಿ ಮತ್ತು ಸಂಧಾನಕಾರರಿಗೆ ನಿರಂತರ ತರಬೇತಿ ನೀಡಬೇಕು. ವಿಶೇಷವಾಗಿ ದುರ್ಬಲ ಪಕ್ಷಗಳ ಹಿತಾಸಕ್ತಿಯನ್ನು ರಕ್ಷಿಸುವುದು, ಪರಿಣಾಮಕಾರಿ ಸಂಧಾನ ನಡೆಸುವುದು ಮತ್ತು ನ್ಯಾಯಯುತ ಪರಿಹಾರ ಕಂಡುಕೊಳ್ಳುವ ಕುರಿತು ತರಬೇತಿ ಅಗತ್ಯ.
ತಂತ್ರಜ್ಞಾನದ ಬಳಕೆಯನ್ನೂ ಹೆಚ್ಚಿಸಬೇಕು. ಅರ್ಜಿ ಸಲ್ಲಿಕೆ, ದಾಖಲೆಗಳ ನಿರ್ವಹಣೆ, ಪ್ರಕರಣದ ಮಾಹಿತಿ, ಸಂಧಾನ ಮತ್ತು ವಿಚಾರಣೆಯ ವಿವಿಧ ಹಂತಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ನಿರ್ವಹಿಸುವುದರಿಂದ ದೂರದ ಪ್ರದೇಶಗಳ ಜನರೂ ಇದರ ಪ್ರಯೋಜನ ಪಡೆಯಬಹುದು.
ಇದರ ಜೊತೆಗೆ ಮಧ್ಯಸ್ಥಿಕೆ ಮತ್ತು ಸಂಧಾನ ಸೇರಿದಂತೆ ಇತರ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸಾಮಾನ್ಯವಾಗಿ ಕಂಡುಬರುವ ಪ್ರಕರಣಗಳಿಗೆ ಸೂಕ್ತ ಮಾರ್ಗಸೂಚಿಗಳು ಮತ್ತು ನ್ಯಾಯಯುತ ಪರಿಹಾರದ ಮಾನದಂಡಗಳನ್ನು ರೂಪಿಸುವುದರಿಂದ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಮತ್ತಷ್ಟು ಹೆಚ್ಚಬಹುದು.
ವಿಲೇವಾರಿಗಿಂತ ನ್ಯಾಯ ಮುಖ್ಯ
ಲೋಕ್ ಅದಾಲತ್ನ ಮೂಲ ಉದ್ದೇಶ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲ. ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆ ಮಾಡುವುದರ ಜೊತೆಗೆ, ಪಕ್ಷಗಾರರಿಗೆ ನ್ಯಾಯಯುತ, ಸ್ವಯಂಪ್ರೇರಿತ ಮತ್ತು ಪರಿಣಾಮಕಾರಿ ಪರಿಹಾರ ದೊರಕಿಸುವುದು ಅದರ ನಿಜವಾದ ಗುರಿಯಾಗಬೇಕು.
ದುರ್ಬಲ ವ್ಯಕ್ತಿಯ ಒಪ್ಪಿಗೆಯನ್ನು ಕೇವಲ ಪ್ರಕರಣ ಮುಗಿಸುವ ಸಾಧನವಾಗಿ ಬಳಸಬಾರದು. ಬದಲಾಗಿ, ಅವರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ರೀತಿಯಲ್ಲಿ ಸಂಧಾನ ನಡೆಯಬೇಕು.
ಪ್ರತಿ ಇಲಾಖೆಯಲ್ಲಿಯೂ ಕಾನೂನು ಸೇವಾ ಕೇಂದ್ರಗಳನ್ನು ತೆರೆಯುವುದು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಜನರಿಗೆ ಹೆಚ್ಚಿನ ಅನುಕೂಲ ಒದಗಿಸಬಹುದು.
ಎಲ್ಲಿ ಮತ್ತು ಹೇಗೆ ಸಂಪರ್ಕಿಸಬೇಕು?
ದೇಶದ ಪ್ರತಿಯೊಂದು ತಾಲೂಕು ನ್ಯಾಯಾಲಯದಲ್ಲಿಯೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಕಾರ್ಯನಿರ್ವಹಿಸುತ್ತದೆ. ಇದರ ಪ್ರಯೋಜನ ಪಡೆಯಲು ಬಯಸುವ ವ್ಯಕ್ತಿಯು ಸಂಬಂಧಪಟ್ಟ ನ್ಯಾಯಾಲಯದಲ್ಲಿರುವ ಕಚೇರಿಯನ್ನು ಸಂಪರ್ಕಿಸಿ ಲಿಖಿತ ಅರ್ಜಿಯ ಮೂಲಕ ದೂರು ಅಥವಾ ಮನವಿಯನ್ನು ಸಲ್ಲಿಸಬಹುದು. ಅರ್ಜಿಯಲ್ಲಿ ಮೊಬೈಲ್ ಸಂಖ್ಯೆಯನ್ನೂ ನಮೂದಿಸುವುದು ಅಗತ್ಯವಾಗಬಹುದು.
ಅರ್ಜಿಯನ್ನು ಪರಿಶೀಲಿಸಿದ ನಂತರ, ಕಾನೂನು ಸೇವಾ ಪ್ರಾಧಿಕಾರವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ವಕೀಲರ ನೆರವು ಅಥವಾ ಅಗತ್ಯ ಕಾನೂನು ಮಾಹಿತಿಯನ್ನು ಒದಗಿಸಬಹುದು. ಅಗತ್ಯವಿದ್ದಲ್ಲಿ ಮುಂದಿನ ಕ್ರಮಗಳ ಬಗ್ಗೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಥವಾ ನ್ಯಾಯಾಧೀಶರ ಮಾರ್ಗದರ್ಶನ ಪಡೆಯಬಹುದು.
ದೇಶದ ಯಾವುದೇ ತಾಲೂಕಿನಲ್ಲಿ ಅರ್ಜಿ ಸಲ್ಲಿಸುವ ಅವಕಾಶವೂ ಕೆಲವು ಸಂದರ್ಭಗಳಲ್ಲಿ ಇರಬಹುದು. ಸಲ್ಲಿಸಿದ ಅರ್ಜಿಯನ್ನು ಸಂಬಂಧಪಟ್ಟ ವ್ಯಾಪ್ತಿಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸುವ ಕ್ರಮವನ್ನು ಪ್ರಾಧಿಕಾರ ಕೈಗೊಳ್ಳುತ್ತದೆ.
ಮುಖ್ಯ ಕಚೇರಿ ದೆಹಲಿಯಲ್ಲಿರುವ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (NLSA) ದೇಶದ ಮಟ್ಟದಲ್ಲಿ ಕಾನೂನು ನೆರವಿನ ವ್ಯವಸ್ಥೆಯನ್ನು ಸಮನ್ವಯಗೊಳಿಸುತ್ತದೆ. ರಾಜ್ಯ ಮಟ್ಟದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (SLSA), ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (DLSA) ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ (TLSA) ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತವೆ.
ಲೋಕ್ ಅದಾಲತ್ ಭಾರತೀಯ ನ್ಯಾಯ ವ್ಯವಸ್ಥೆಯ ಮಹತ್ವದ ಜನಸ್ನೇಹಿ ಹೆಜ್ಜೆಯಾಗಿದೆ. ನ್ಯಾಯವನ್ನು ಕೇವಲ ನ್ಯಾಯಾಲಯದ ಕಟ್ಟಡದೊಳಗೆ ಸೀಮಿತಗೊಳಿಸದೆ, ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನ ಇದಾಗಿದೆ.
ವೇಗವಾದ ನ್ಯಾಯ, ಕಡಿಮೆ ವೆಚ್ಚ, ಸರಳ ಪ್ರಕ್ರಿಯೆ ಮತ್ತು ಪರಸ್ಪರ ಒಪ್ಪಿಗೆಯ ಮೂಲಕ ವಿವಾದ ಪರಿಹಾರ—ಇವು ಲೋಕ್ ಅದಾಲತ್ನ ಪ್ರಮುಖ ಶಕ್ತಿಗಳು. ಆದರೆ ಇದರ ಯಶಸ್ಸು ಪ್ರಕರಣಗಳ ವಿಲೇವಾರಿ ಸಂಖ್ಯೆಯಲ್ಲಿ ಅಲ್ಲ; ನ್ಯಾಯವನ್ನು ಪಡೆಯುವ ವ್ಯಕ್ತಿಯು ತಾನು ನ್ಯಾಯ ಪಡೆದಿದ್ದೇನೆ ಎಂಬ ವಿಶ್ವಾಸ ಹೊಂದುವುದರಲ್ಲಿ ಅಡಗಿದೆ.
ದುರ್ಬಲ ಪಕ್ಷಗಳ ರಕ್ಷಣೆ, ಜನರಿಗೆ ಕಾನೂನು ಅರಿವು, ತರಬೇತಿ ಪಡೆದ ಸಂಧಾನಕಾರರು ಮತ್ತು ತಂತ್ರಜ್ಞಾನದ ಪರಿಣಾಮಕಾರಿ ಬಳಕೆ—ಈ ಅಂಶಗಳಿಗೆ ಹೆಚ್ಚಿನ ಒತ್ತು ನೀಡಿದರೆ, ಲೋಕ್ ಅದಾಲತ್ ಭವಿಷ್ಯದಲ್ಲಿ ಇನ್ನಷ್ಟು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಜನನ್ಯಾಯ ವ್ಯವಸ್ಥೆಯಾಗಿ ಬೆಳೆಯಬಹುದು.
ನ್ಯಾಯ ಜನರ ಬಳಿಗೆ ಕೇವಲ ದಾರಿಯಲ್ಲಿ ತಲುಪಿಸುವುದಲ್ಲ; ಜನರು ನ್ಯಾಯದ ಹುಡುಕಾಟದಲ್ಲಿ ವರ್ಷಗಳ ಕಾಲ ಅಲೆದಾಡಬೇಕಾಗದಂತೆ ಮಾಡುವುದೇ ಲೋಕ್ ಅದಾಲತ್ನ ನಿಜವಾದ ಆಶಯ.
✍️ ಸುರೇಂದ್ರ ಡಿ
ವಕೀಲರು, ಪುತ್ತೂರು ತಾಲೂಕು, ದ.ಕ.







Comments