ಕೃಷ್ಣ ಜನ್ಮಾಷ್ಟಮಿ, ತೆನೆ ಹಬ್ಬಕ್ಕೆ ಸ್ಥಳೀಯ ರಜೆ ಘೋಷಿಸಲು ಶಾಸಕ ವೇದವ್ಯಾಸ ಕಾಮತ್ ಮನವಿ

ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಕ್ರೈಸ್ತ ಸಮುದಾಯದ ಮರಿಯ ಜಯಂತಿ (ತೆನೆ ಹಬ್ಬ) ಆಚರಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸ್ಥಳೀಯ ರಜೆ ಘೋಷಿಸುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇದೇ ಸೆಪ್ಟೆಂಬರ್ 4 ರಂದು ಕರಾವಳಿ ಜಿಲ್ಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಇದು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯಗಳು ಹಾಗೂ ನೈತಿಕ ಶಿಕ್ಷಣವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅದೇ ರೀತಿ ಸೆಪ್ಟೆಂಬರ್ 8 ರಂದು ಕರಾವಳಿ ಭಾಗದ ಕ್ರೈಸ್ತ ಬಾಂಧವರು ಮರಿಯ ಜಯಂತಿ ಹಾಗೂ ತೆನೆ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಿದ್ದಾರೆ. ಈ ಹಬ್ಬದ ಆಚರಣೆಗೆ ಅನುಕೂಲವಾಗುವಂತೆ ರಜೆ ಘೋಷಿಸಬೇಕು ಎಂದು ಕ್ರೈಸ್ತ ಸಮುದಾಯದ ಮುಖಂಡರು ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಮುಖರು ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕರು ಹಾಗೂ ಭಕ್ತಾದಿಗಳು ಕುಟುಂಬ ಸಮೇತರಾಗಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ, ಜಿಲ್ಲಾಧಿಕಾರಿಗಳು ತಮ್ಮ ವಿವೇಚನಾ ಅಧಿಕಾರ ಬಳಸಿ ಸೆಪ್ಟೆಂಬರ್ 4 ರಂದು ಕೃಷ್ಣ ಜನ್ಮಾಷ್ಟಮಿ ಮತ್ತು ಸೆಪ್ಟೆಂಬರ್ 8 ರಂದು ತೆನೆ ಹಬ್ಬಕ್ಕೆ ಸಾರ್ವತ್ರಿಕ/ಸ್ಥಳೀಯ ರಜೆ ನೀಡಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.







Comments