ಲಡಾಖ್‌ನಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಪವಾಡ ಸದೃಶವಾಗಿ ಬದುಕುಳಿದ ಮೇಜರ್ ಜನರಲ್ ಸೇರಿ ಮೂವರು ಅಧಿಕಾರಿಗಳು!

ಲಡಾಖ್‌ನ ಲೇಹ್ ಭಾಗದ ಟ್ಯಾಂಗ್ಲೆ ಪರ್ವತ ಪ್ರದೇಶದಲ್ಲಿ ಭಾರತೀಯ ಸೇನೆಯ 'ಚೀತಾ' ಹೆಲಿಕಾಪ್ಟರ್ ಇತ್ತೀಚೆಗೆ ಪತನಗೊಂಡಿದೆ. ಮೇ 20 ರಂದು ನಡೆದ ಈ ಅಪಘಾತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಹಿರಿಯ ಅಧಿಕಾರಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಿಂಗಲ್ ಎಂಜಿನ್ ಹೆಲಿಕಾಪ್ಟರ್‌ನಲ್ಲಿ 3ನೇ ಇನ್‌ಫಾಂಟ್ರಿ ಡಿವಿಷನ್‌ನ ಮೇಜರ್ ಜನರಲ್ ಸಚಿನ್ ಮೆಹ್ರಾ, ಒಬ್ಬರು ಲೆಫ್ಟಿನೆಂಟ್ ಕರ್ನಲ್ ಹಾಗೂ ಮತ್ತೊಬ್ಬ ಮೇಜರ್ ಅಧಿಕಾರಿ ಪ್ರಯಾಣಿಸುತ್ತಿದ್ದರು. ಶನಿವಾರ ಸೇನಾ ಅಧಿಕಾರಿಗಳು ಈ ಘಟನೆಯನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ.
ಕಠಿಣ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಸಂಪೂರ್ಣ ಜಖಂಗೊಂಡಿದ್ದರೂ, ಅಧಿಕಾರಿಗಳು ಕೇವಲ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿರುವುದು ಒಂದು ಪವಾಡವೆಂದೇ ಹೇಳಲಾಗುತ್ತಿದೆ. ಅಪಘಾತದ ಬೆನ್ನಲ್ಲೇ ಮೇಜರ್ ಜನರಲ್ ಸಚಿನ್ ಮೆಹ್ರಾ ಅವರು ಧ್ವಂಸಗೊಂಡ ಹೆಲಿಕಾಪ್ಟರ್ ಮುಂದೆ ನಿಂತು ತೆಗೆದುಕೊಂಡ ಸೆಲ್ಪಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ದೇಶದ ಜನತೆ ಅಧಿಕಾರಿಗಳ ಸುರಕ್ಷತೆಗೆ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಅಪಘಾತವು ಹಳೆಯದಾಗುತ್ತಿರುವ 'ಚೀತಾ' ಹೆಲಿಕಾಪ್ಟರ್‌ಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ. 1970ರ ದಶಕದಲ್ಲಿ ಸೇನೆಗೆ ಸೇರ್ಪಡೆಯಾಗಿ 'ಆಪರೇಷನ್ ಮೇಘದೂತ್' ಸೇರಿದಂತೆ ಹಲವು ಐತಿಹಾಸಿಕ ಕಾರ್ಯಾಚರಣೆಗಳಲ್ಲಿ ಇವು ಪ್ರಮುಖ ಪಾತ್ರ ವಹಿಸಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇವು ಪದೇ ಪದೇ ಅಪಘಾತಕ್ಕೀಡಾಗುತ್ತಿರುವುದು ಆತಂಕ ತಂದಿದ್ದು, ಪ್ರಸ್ತುತ ಪತನಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸೇನೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.







Comments