ಕೆಎಸ್‌ಆರ್‌ಟಿಸಿ ದಸರಾ ವಿಶೇಷ ಪ್ರವಾಸ ಪ್ಯಾಕೇಜ್ ಅಕ್ಟೋಬರ್ 25ರವರೆಗೆ ವಿಸ್ತರಣೆ

ಮಂಗಳೂರು ಹಾಗೂ ಉಡುಪಿ ವಿಭಾಗಗಳಿಂದ ವಿವಿಧ ಪ್ರಸಿದ್ಧ ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ದಸರಾ ವಿಶೇಷ ಬಸ್ ಪ್ರವಾಸ ಪ್ಯಾಕೇಜ್‌ಗಳನ್ನು ಅಕ್ಟೋಬರ್ 25 ರವರೆಗೆ ವಿಸ್ತರಿಸಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ಆದೇಶಿಸಿದೆ. ಆರಂಭದಲ್ಲಿ ಈ ಪ್ರವಾಸಗಳನ್ನು ಅಕ್ಟೋಬರ್ 11 ರಿಂದ 20 ರವರೆಗೆ ಮಾತ್ರ ನಡೆಸಲು ಯೋಜಿಸಲಾಗಿತ್ತು. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ ದಿನಾಂಕವನ್ನು ಲಂಬಿಸಲಾಗಿದೆ.
ಮಂಗಳೂರು ಪ್ಯಾಕೇಜ್ ("ದಸರಾ ನವದುರ್ಗಾ ದರ್ಶನ"):
ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ಈ ಬಸ್ ಮರೋಳಿ ಸೂರ್ಯನಾರಾಯಣ, ಬೋಳಾರ ಮಾರಿಯಮ್ಮ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಕೊಡ್ಯಡ್ಕ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಸಸಿಹಿತ್ಲು ಭಗವತಿ, ಚಿತ್ರಾಪುರ ದುರ್ಗಾಪರಮೇಶ್ವರಿ, ಉರ್ವ ಮರಿಯಮ್ಮ ಹಾಗೂ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯಗಳನ್ನು ಸಂದರ್ಶಿಸಿ ರಾತ್ರಿ 8.30ಕ್ಕೆ ಹಿಂತಿರುಗಲಿದೆ. ಇದರ ಟಿಕೆಟ್ ದರ ಹಿರಿಯರಿಗೆ ₹500 ಹಾಗೂ 6 ರಿಂದ 12 ವರ್ಷದ ಮಕ್ಕಳಿಗೆ ₹400 ಆಗಿದೆ.
ಉಡುಪಿ ಪ್ಯಾಕೇಜ್‌ಗಳು:
ಉಡುಪಿಯಿಂದ ಎರಡು ವಿಭಿನ್ನ ಮಾರ್ಗಗಳಲ್ಲಿ ವಿಶೇಷ ಪ್ರವಾಸ ಕಲ್ಪಿಸಲಾಗಿದೆ.
* ಮಾರ್ಗ 1: ಬೆಳಗ್ಗೆ 7.30ಕ್ಕೆ ಹೊರಟು ಕೊಡ್ಯಡ್ಕ ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ, ಕಿಗ್ಗ ಋಷ್ಯಶೃಂಗೇಶ್ವರ, ಹರಿಹರಪುರ ಮಠ ಮತ್ತು ಪೆರ್ಡೂರು ಅನಂತ ಪದ್ಮನಾಭ ದೇವಾಲಯಗಳನ್ನು ಸಂದರ್ಶಿಸಿ ರಾತ್ರಿ 8 ಗಂಟೆಗೆ ಉಡುಪಿಗೆ ಮರಳಲಿದೆ.
* ಮಾರ್ಗ 2: ನೀಲಾವರ ಮಹಿಷಮರ್ದಿನಿ, ಮಂದಾರ್ತಿ, ಕಮಲಶಿಲೆ, ಸೌಕೂರು ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕಾ ಮತ್ತು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯಗಳನ್ನು ಒಳಗೊಂಡಿದ್ದು, ಸಂಜೆ 6.30ಕ್ಕೆ ಹಿಂತಿರುಗಲಿದೆ.
ಉಡುಪಿಯ ಎರಡೂ ಪ್ಯಾಕೇಜ್‌ಗಳಿಗೂ ಹಿರಿಯರಿಗೆ ₹500 ಮತ್ತು ಮಕ್ಕಳಿಗೆ ₹400 ದರ ನಿಗದಿಪಡಿಸಲಾಗಿದೆ. ಆಸಕ್ತ ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ (www.ksrtc.in) ಮೂಲಕ ತಮ್ಮ ಟಿಕೆಟ್‌ಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದಾಗಿದೆ.







Comments