ಪುತ್ರಿಯರ ಅಕ್ರಮ ನೇಮಕ ಆರೋಪ: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತು

ಬೆಂಗಳೂರು, ಜುಲೈ 13: ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕಾರ ಅವರನ್ನು ತಮ್ಮ ಪುತ್ರಿಯರ ಅಕ್ರಮ ನೇಮಕಾತಿಗೆ ನೆರವಾದ ಆರೋಪದ ಹಿನ್ನೆಲೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಆದೇಶ ಹೊರಡಿಸಿದ್ದಾರೆ.
ಶಿವಶಂಕರಪ್ಪ ವಿರುದ್ಧದ ಗಂಭೀರ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಲು ಶಿಫಾರಸು ಮಾಡಲಾಗಿದ್ದು, ಈ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸಲು ರಾಷ್ಟ್ರಪತಿಗಳಿಗೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ. ಮುಂದಿನ ಆದೇಶ ಬರುವವರೆಗೆ ಕೆಪಿಎಸ್‌ಸಿಯ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
ಶಿವಶಂಕರಪ್ಪ ಸಾಹುಕಾರ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮ್ಮ ಪುತ್ರಿಗೆ ಸರ್ಕಾರಿ ಹುದ್ದೆ ದೊರಕುವಂತೆ ಮಾಡಲು ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಲು ಸಹಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಈ ಆರೋಪಗಳಿಗೆ ದೃಢತೆ ಕಂಡುಬಂದಿದೆ ಎನ್ನಲಾಗಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಖಾಲಿ ಇದ್ದ 50 ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳಿಗಾಗಿ 2024ರ ಮಾರ್ಚ್ 15ರಂದು ಅಧಿಸೂಚನೆ ಪ್ರಕಟಿಸಲಾಗಿತ್ತು. ಈ ಹುದ್ದೆಗಳಿಗೆ ಶಿವಶಂಕರಪ್ಪ ಅವರ ಪುತ್ರಿ ಸುಮಾ ಎಸ್. ಸಾಹುಕಾರ ಅವರು 3ಬಿ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅವರು 1:3 ಅನುಪಾತದ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದು, ಫೆಬ್ರವರಿ 19ರಂದು ದಾಖಲೆಗಳ ಪರಿಶೀಲನೆಗೆ ಹಾಜರಾಗಿದ್ದರು.
ದಾಖಲೆಗಳ ಪರಿಶೀಲನೆ ವೇಳೆ, 2020ರ ಮಾರ್ಚ್ 4ರಂದು ನೀಡಲಾದ ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ ಕುಟುಂಬದ ವಾರ್ಷಿಕ ಆದಾಯ ಕೇವಲ ₹40,000 ಎಂದು ಉಲ್ಲೇಖಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಆದರೆ, ಶಿವಶಂಕರಪ್ಪ ಅವರು 2019ರಿಂದಲೇ ಆಯೋಗದ ಸದಸ್ಯರಾಗಿ ವೇತನ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಈ ಆದಾಯ ವಿವರ ಸುಳ್ಳು ಎಂದು ಸ್ಪಷ್ಟವಾಗಿದೆ.
ಕೆಪಿಎಸ್‌ಸಿಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ, ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







Comments