ಕೊಂಬೆಟ್ಟು ಕಾಲೇಜು ವಿದ್ಯಾರ್ಥಿ ಶ್ರೀವತ್ಸ ನಾಪತ್ತೆ: ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಪುತ್ತೂರು: ಕೊಂಬೆಟ್ಟು ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಶ್ರೀವತ್ಸ (17) ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಪತ್ತೆಯಾದ ಯುವಕ ಎಡಮಂಗಲ ಪೊಯ್ಯತ್ತೂರು ನಿವಾಸಿ ಹಾಗೂ ಬೆಳ್ಳಾರೆಯಲ್ಲಿ 'ವಿನಾಯಕ ಸ್ಪೋರ್ಟ್ಸ್' ಅಂಗಡಿ ನಡೆಸುತ್ತಿರುವ ನಾರಾಯಣ ಪೂಜಾರಿ ಅವರ ಮಗನಾಗಿದ್ದಾನೆ.
ಅಕ್ಟೋಬರ್ 22ರಂದು ಬೆಳಿಗ್ಗೆ 6.50ರ ಬಸ್ಸಿಗೆ ಕಾಲೇಜಿಗೆ ತೆರಳುವುದಾಗಿ ಹೇಳಿ ಕಾಲೇಜು ಸಮವಸ್ತ್ರ ಧರಿಸಿ ಮನೆಯಿಂದ ಹೊರಟಿದ್ದ ಶ್ರೀವತ್ಸ, ಸಂಜೆಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಸಂಬಂಧಿಕರ ಹಾಗೂ ಸ್ನೇಹಿತರ ಮನೆಗಳಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಆರಂಭದಲ್ಲಿ ಸ್ನೇಹಿತರ ಮನೆಗೆ ಹೋಗಿರಬಹುದು ಎಂದು ಭಾವಿಸಿ ಕಾಯುತ್ತಿದ್ದರೂ ಆತ ಪತ್ತೆಯಾಗದ ಹಿನ್ನೆಲೆಯಲ್ಲಿ ತಂದೆ ನಾರಾಯಣ ಪೂಜಾರಿ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಸುಮಾರು 15 ದಿನಗಳ ಹಿಂದೆ ಅಜ್ಜಿ ಕಮಲ ಅವರ ಬ್ಯಾಂಕ್ ಖಾತೆಯಿಂದ ಹಣ ತೆಗೆದಿರುವ ವಿಚಾರವಾಗಿ ಮನೆಯಲ್ಲಿ ಶ್ರೀವತ್ಸನಲ್ಲಿ ವಿಚಾರಿಸಲಾಗಿತ್ತು. ಈ ವಿಷಯಕ್ಕೆ ಆತ ತೀವ್ರ ಬೇಸರಗೊಂಡಿದ್ದ ಎಂದು ಹೇಳಲಾಗಿದೆ. ಅಪ್ರಾಪ್ತ ವಯಸ್ಕನಾಗಿರುವ ಮಗ ಕಾಣೆಯಾಗಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ತಂದೆ, ತಕ್ಷಣವೇ ಮಗನನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿನಂತಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.







Comments