ಮನೆಗೆ ತಡವಾಗಿ ಬಂದಿದ್ದಕ್ಕೆ ಮಾತಿನ ಚಕಮಕಿ: ಕೆರೆಗೆ ಬಿದ್ದು ಪ್ರಾಣ ಕಳೆದುಕೊಂಡ ತಾಯಿ-ಮಗಳು

ಮಡಿಕೇರಿ: ಮನೆಗೆ ತಡವಾಗಿ ಬಂದಿದ್ದಕ್ಕೆ ತಾಯಿ ಗದರಿಸಿದ್ದರಿಂದ ಮನನೊಂದ ಮಗಳು ಕೆರೆಗೆ ಹಾರಿದ್ದು, ಆಕೆಯನ್ನು ರಕ್ಷಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ತಲಕಾವೇರಿ ಸಮೀಪದ ಕೆಂಪರಾಜಮೊಟ್ಟೆ ಕಾಲೋನಿಯಲ್ಲಿ ನಡೆದಿದೆ.
ಮೃತರನ್ನು ಪ್ರೇಮಾ (45) ಹಾಗೂ ಅವರ ಮಗಳು ಪ್ರಿಯಾಂಕಾ (14) ಎಂದು ಗುರುತಿಸಲಾಗಿದೆ. ಪ್ರಿಯಾಂಕಾ ಕರಿಕೆಯ ಆಶ್ರಮ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಶನಿವಾರ ಶಾಲೆಯಿಂದ ಮನೆಗೆ ತಡವಾಗಿ ಬಂದಿದ್ದಕ್ಕೆ ತಾಯಿ ಪ್ರೇಮಾ ಆಕೆಯನ್ನು ಗದರಿಸಿದ್ದರು. ಇದರಿಂದ ಆಕ್ರೋಶಗೊಂಡ ಪ್ರಿಯಾಂಕಾ, ಮನೆಯ ಪಕ್ಕದಲ್ಲಿದ್ದ ಕೆರೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಓಡಿ ಕೆರೆಗೆ ಹಾರಿದ್ದಾಳೆ.
ಮಗಳನ್ನು ರಕ್ಷಿಸುವ ಆತುರದಲ್ಲಿ, ಈಜು ಬಾರದಿದ್ದರೂ ತಾಯಿ ಪ್ರೇಮಾ ಕೂಡ ತಕ್ಷಣವೇ ಕೆರೆಗೆ ಹಾರಿದ್ದಾರೆ. ಆದರೆ ಸುಮಾರು 15 ರಿಂದ 20 ಅಡಿ ಆಳವಿದ್ದ ಕೆರೆಯಲ್ಲಿ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳವಾರ ಅಗ್ನಿಶಾಮಕ ಸಿಬ್ಬಂದಿ ಹಾಗೂ ಭಾಗಮಂಡಲ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶ್ರಮ ವಹಿಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಈ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







Comments