ಕೇರಳದಲ್ಲಿ ಹೊಸ ವೈರಸ್ ಪತ್ತೆ : ನಾಲ್ಕು ವರ್ಷದ ಬಾಲಕಿ ಸಾವು, ಆರೋಗ್ಯ ಇಲಾಖೆ ಕಟ್ಟೆಚ್ಚರ

ಕೇರಳದಲ್ಲಿ ಅಪಾಯಕಾರಿ 'ಶಿಗೆಲ್ಲಾ' ಬ್ಯಾಕ್ಟೀರಿಯಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೋಝಿಕ್ಕೋಡ್ ಜಿಲ್ಲೆಯ ನಾಲ್ಕು ವರ್ಷದ ನೀಲಾ ಎಂಬ ಬಾಲಕಿ ಈ ಸೋಂಕಿಗೆ ಬಲಿಯಾಗಿದ್ದಾಳೆ. ವಯನಾಡ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನೂರಾರು ಜನರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಹಲವು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿಗೆಲ್ಲಾ ಮುಖ್ಯವಾಗಿ ಕಲುಷಿತ ನೀರು, ಅಸ್ವಚ್ಛ ಆಹಾರ ಮತ್ತು ಕಳಪೆ ನೈರ್ಮಲ್ಯದಿಂದ ಹರಡುವ ಕರುಳಿನ ಸೋಂಕಾಗಿದೆ. ತೀವ್ರ ಅತಿಸಾರ, ಜ್ವರ, ಹೊಟ್ಟೆನೋವು ಮತ್ತು ವಾಂತಿ ಇದರ ಪ್ರಮುಖ ಲಕ್ಷಣಗಳಾಗಿವೆ. ಮಕ್ಕಳಲ್ಲಿ ಈ ರೋಗ ಬೇಗನೆ ಉಲ್ಬಣಗೊಳ್ಳುವುದರಿಂದ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ವೈದ್ಯರು ಸೂಚಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಕೇರಳ ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಂಡಿದೆ. ಆರೋಗ್ಯ ಸಚಿವ ಕೆ. ಮುರಳೀಧರನ್ ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಡ್ಡಾಯವಾಗಿ ಕುದಿಸಿದ ನೀರನ್ನೇ ಬಳಸಲು, ಎಲ್ಲೆಡೆ ನೀರಿನ ಮೂಲಗಳ ಕ್ಲೋರಿನೇಷನ್ ಮಾಡಲು ಹಾಗೂ ಅಸ್ವಚ್ಛ ಹೋಟೆಲ್‌ಗಳನ್ನು ಬಂದ್ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.







Comments