ನೀಟ್ ವಿಚಾರಕ್ಕೆ ತಂಗಿ ಆತ್ಮಹತ್ಯೆ: ಮಂಗಳೂರಿನಲ್ಲಿ ಸಹೋದರ ಶವವಾಗಿ ಪತ್ತೆ

ಮಂಗಳೂರು, ಆ.11: ನೀಟ್ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಕೇರಳದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆನ್ನಲ್ಲೇ, ಆಕೆಯ ಸಹೋದರ ಮಂಗಳೂರಿನ ಲಾಡ್ಜ್ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಕೇರಳದ ಬೇಕಲ್ನ ಪಳ್ಳಿಕ್ಕರ ಮುಕೂಡ್ ನಿವಾಸಿ ಮಹೇಶ್ ಅವರ ಪುತ್ರ ಅರ್ಜುನ್ ಮಹೇಶ್ (24) ಮೃತಪಟ್ಟವರು. ಕಳೆದ ಜೂನ್ನಲ್ಲಿ ಅರ್ಜುನ್ ಅವರ ಸಹೋದರಿ ಐಜಾ ಆರ್. ಮಹೇಶ್ ಅವರು ತರಬೇತಿ ಕೇಂದ್ರದ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಐಜಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿತ್ತು.
ತಂಗಿಯ ಸಾವಿನ ಬಳಿಕ ಗಲ್ಫ್ನಿಂದ ಮನೆಗೆ ಬಂದಿದ್ದ ಅರ್ಜುನ್, ಬಳಿಕ ಉದ್ಯೋಗದ ನಿಮಿತ್ತ ಮತ್ತೆ ಗಲ್ಫ್ಗೆ ತೆರಳಿದ್ದರು. ಭಾನುವಾರ ಗಲ್ಫ್ನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದ ಅವರು, ಮನೆಗೆ ತೆರಳುವುದಾಗಿ ಸ್ನೇಹಿತರಿಗೆ ತಿಳಿಸಿದ್ದರು. ಅದೇ ದಿನ ಮಧ್ಯಾಹ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರೂ ಮನೆಗೆ ಬರುವ ಬಗ್ಗೆ ಮಾಹಿತಿ ನೀಡಿರಲಿಲ್ಲ.
ನಂತರ ಅರ್ಜುನ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ಕುಟುಂಬಸ್ಥರು ಮಂಗಳೂರಿಗೆ ಬಂದು ಹುಡುಕಾಟ ನಡೆಸಿದರು. ಸೋಮವಾರ ಮಧ್ಯಾಹ್ನ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರಿನ ಲಾಡ್ಜ್ವೊಂದರಲ್ಲಿ ಅರ್ಜುನ್ ಶವವಾಗಿ ಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ಆದರೆ, ಸಣ್ಣ ಚೀಟಿಯೊಂದರಲ್ಲಿ “ಅಮ್ಮಾ, ಐ ಆ್ಯಮ್ ಸಾರಿ” ಎಂದು ಬರೆದಿರುವುದು ಹಾಗೂ ಇಬ್ಬರು ಆಪ್ತ ಸ್ನೇಹಿತರಿಗೆ ಮಾಹಿತಿ ನೀಡುವಂತೆ ಉಲ್ಲೇಖಿಸಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜುನ್ ಅವರ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.







Comments