ಕೇರಳದಲ್ಲಿ ಭಾರಿ ಮಳೆ, ಪ್ರವಾಹ ಹಾಗೂ ಭೂಕುಸಿತ: 15 ಮಂದಿ ಬಲಿ, ಹಲವರು ನಾಪತ್ತೆ

ದೇವರನಾಡು ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾಲು ಸಾಲು ಅನಾಹುತಗಳು ಸಂಭವಿಸಿವೆ. ಭೀಕರ ಪ್ರವಾಹ ಹಾಗೂ ಭೂಕುಸಿತದ ಪರಿಣಾಮವಾಗಿ ಈವರೆಗೆ 15 ಜನರು ಪ್ರಾಣ ಕಳೆದುಕೊಂಡಿದ್ದು, 7 ಜನರು ನಾಪತ್ತೆಯಾಗಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ತಕ್ಷಣವೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯಾದ್ಯಂತ ಒಟ್ಟು 316 ಪರಿಹಾರ ಶಿಬಿರಗಳನ್ನು ತೆರೆದು 11,018 ಕ್ಕೂ ಹೆಚ್ಚು ಜನರಿಗೆ ಸುರಕ್ಷಿತ ಆಶ್ರಯ ಕಲ್ಪಿಸಿದೆ.

ಮಳೆ ಅಬ್ಬರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ತೀವ್ರವಾಗಿ ತತ್ತರಿಸಿವೆ. ಕೊಟ್ಟಾಯಂ ಜಿಲ್ಲೆಯಲ್ಲಿ ಮಗುವೂ ಸೇರಿದಂತೆ ಮೂವರು ಮೃತಪಟ್ಟಿದ್ದರೆ, ಮಲಪ್ಪುರಂನಲ್ಲಿ ನಾಲ್ಕ ಹಾಗೂ ಕೊಲ್ಲಂ ಮತ್ತು ಎರ್ನಾಕುಲಂನಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದಂತೆ ಇಡುಕ್ಕಿ, ಮೂವಾಟ್ಟುಪುಳ, ಕಣ್ಣೂರು ಮತ್ತು ಕೋಝಿಕ್ಕೋಡ್ ಜಿಲ್ಲೆಗಳಿಂದಲೂ ಸಾವು ನೋವುಗಳು ವರದಿಯಾಗಿವೆ. ಇನ್ನು ನಾಪತ್ತೆಯಾಗಿರುವ ಏಳು ಜನರಿಗಾಗಿ ಕಣ್ಣೂರು, ಕೊಲ್ಲಂ, ಮಲಪ್ಪುರಂ ಹಾಗೂ ಇಡುಕ್ಕಿ ಭಾಗಗಳಲ್ಲಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ಪರಿಸ್ಥಿತಿಯನ್ನು ನಿಭಾಯಿಸಲು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಚೆಂಗನ್ನೂರು ಭಾಗದಲ್ಲಿ 14 ಮೀನುಗಾರಿಕಾ ದೋಣಿಗಳನ್ನು ನಿಯೋಜಿಸಲಾಗಿದ್ದು, ವೈಮಾನಿಕ ರಕ್ಷಣೆಗಾಗಿ ತಮಿಳುನಾಡಿನ ಸುಲೂರ್‌ನಿಂದ ಬಂದ ಹೆಲಿಕಾಪ್ಟರ್‌ಗಳನ್ನು ಸಜ್ಜಾಗಿಡಲಾಗಿದೆ. ಜೊತೆಗೆ ತೀವ್ರ ಸಂಕಷ್ಟದಲ್ಲಿರುವ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ (NDRF) ತಂಡಗಳು ಕಾರ್ಯನಿರತವಾಗಿದ್ದು, ಅಗತ್ಯಬಿದ್ದಲ್ಲಿ ಐಟಿಬಿಪಿ (ITBP) ಮತ್ತು ಡಿಎಸ್‌ಸಿ (DSC) ಪಡೆಗಳನ್ನು ಕಣಕ್ಕಿಳಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.







Comments