
ಪಶ್ಚಿಮ ಘಟ್ಟಗಳ ಕಸ್ತೂರಿರಂಗನ್ ವರದಿ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

ಪಶ್ಚಿಮ ಘಟ್ಟಗಳ ಕಸ್ತೂರಿರಂಗನ್ ವರದಿ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ
ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿರಂಗನ್ ವರದಿಯ ಏಳನೇ ಕರಡು ಅಧಿಸೂಚನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರ ನೀಡಿರುವ 60 ದಿನಗಳ ಅವಧಿಯೊಳಗೆ ರಾಜ್ಯದ ಪರವಾಗಿ ಪ್ರಬಲ ಆಕ್ಷೇಪಣಾ ವರದಿಯನ್ನು ಸಲ್ಲಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಎಚ್.ಡಿ. ತಮ್ಮಣ್ಣ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2026ರ ಜುಲೈ 27ರಂದು ಹೊರಡಿಸಿರುವ ಏಳನೇ ಕರಡು ಅಧಿಸೂಚನೆಗೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಲಿದೆ ಎಂದು ಹೇಳಿದರು.
ಹಿಂದಿನ ಆರು ಕರಡು ಅಧಿಸೂಚನೆಗಳ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ಏಳನೇ ಕರಡು ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಪ್ರಕಟವಾದ ದಿನದಿಂದ 60 ದಿನಗಳೊಳಗೆ ರಾಜ್ಯಗಳು ತಮ್ಮ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಬೇಕಾಗಿದೆ. ರಾಜ್ಯಕ್ಕೆ ಇನ್ನೂ ಸುಮಾರು ಒಂದು ತಿಂಗಳ ಕಾಲಾವಕಾಶವಿದ್ದು, ಈ ಅವಧಿಯಲ್ಲಿ ಸಮಗ್ರ ಆಕ್ಷೇಪಣಾ ವರದಿ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ರೈತರು ಹಾಗೂ ಸಾರ್ವಜನಿಕರಿಗೆ ಉಂಟಾಗಬಹುದಾದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕಸ್ತೂರಿರಂಗನ್ ವರದಿಯನ್ನು ವಿರೋಧಿಸುತ್ತಿದೆ. ಕರಡು ಅಧಿಸೂಚನೆಯ ವ್ಯಾಪ್ತಿಯಲ್ಲಿ ಕರ್ನಾಟಕದ 1,000ಕ್ಕೂ ಹೆಚ್ಚು ಗ್ರಾಮಗಳು ಒಳಗೊಂಡಿವೆ ಎಂದು ಸಚಿವರು ಹೇಳಿದರು.
10 ಜಿಲ್ಲೆಗಳ 1,449 ಗ್ರಾಮಗಳು
ಕಸ್ತೂರಿರಂಗನ್ ಸಮಿತಿಯ ಶಿಫಾರಸಿನಂತೆ ಕರ್ನಾಟಕದ 10 ಜಿಲ್ಲೆಗಳ 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವಾಗಿ ಗುರುತಿಸಲಾಗಿದೆ. ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳು ಇದರ ವ್ಯಾಪ್ತಿಯಲ್ಲಿವೆ.
ಈ ಜಿಲ್ಲೆಗಳ 39 ತಾಲ್ಲೂಕುಗಳ 1,449 ಗ್ರಾಮಗಳು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರಲಿವೆ ಎಂದು ವಿಧಾನಸಭೆಗೆ ಮಾಹಿತಿ ನೀಡಲಾಗಿದೆ.
ಯಾವ ಚಟುವಟಿಕೆಗಳಿಗೆ ನಿಯಂತ್ರಣ?
ಕರಡು ಅಧಿಸೂಚನೆಯಡಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರಗಳು ಸೇರಿದಂತೆ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ನಿರ್ಮಾಣ ಕಾಮಗಾರಿಗಳು ಮತ್ತು ಟೌನ್‌ಶಿಪ್ ಅಭಿವೃದ್ಧಿ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲು ಪ್ರಸ್ತಾವಿಸಲಾಗಿದೆ.
2013ರಲ್ಲಿ ಡಾ. ಕೆ. ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿತ್ತು. ಆರು ರಾಜ್ಯಗಳಲ್ಲಿ ಒಟ್ಟು ಸುಮಾರು 56,000 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಇದರಲ್ಲಿ ಕರ್ನಾಟಕದ 20,668 ಚದರ ಕಿಲೋಮೀಟರ್ ಪ್ರದೇಶ ಸೇರಿದೆ.
ಹಿಂದಿನ ಆರು ಕರಡು ಅಧಿಸೂಚನೆಗಳು ನಿಗದಿತ ಅವಧಿಯಲ್ಲಿ ಅಂತಿಮ ಅಧಿಸೂಚನೆ ಹೊರಬರದ ಹಿನ್ನೆಲೆಯಲ್ಲಿ ರದ್ದಾಗಿದ್ದವು. ಇದೀಗ ಕೇಂದ್ರ ಸರ್ಕಾರ ಏಳನೇ ಕರಡು ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಪ್ರಬಲ ಆಕ್ಷೇಪಣೆ ಸಲ್ಲಿಸಲು ಮುಂದಾಗಿದೆ.







Comments