ಕಡಬ: ಭಾರಿ ಗಾಳಿ-ಮಳೆಗೆ ಅಡಿಕೆ ಮರ ಬಿದ್ದು ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ದುರಂತ ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಗಾಳಿಯ ರಭಸಕ್ಕೆ ಅಡಿಕೆ ಮರವೊಂದು ಮುರಿದು ಬಿದ್ದು ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ದುರಂತ ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಕೇವಳದಲ್ಲಿ ಶುಕ್ರವಾರ ನಡೆದಿದೆ. ಕೇವಳ ನಿವಾಸಿ ಯಾದವ ಗೌಡ (೬೬) ಮೃತಪಟ್ಟ ದುರದೃಷ್ಟಕರ ವ್ಯಕ್ತಿಯಾಗಿದ್ದಾರೆ.

ಯಾದವ ಗೌಡ ಅವರು ತಮ್ಮ ಅಡಿಕೆ ತೋಟದಲ್ಲಿ ದೈನಂದಿನ ಕೆಲಸದಲ್ಲಿ ತೊಡಗಿದ್ದಾಗ ಏಕಾಏಕಿ ಭಾರಿ ಗಾಳಿ-ಮಳೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಬಲವಾದ ಗಾಳಿಗೆ ಅಡಿಕೆ ಮರವೊಂದು ಸಡನ್ನಾಗಿ ಮುರಿದು ಅವರ ಮೇಲೆ ಬಿದ್ದಿದೆ. ಪರಿಣಾಮವಾಗಿ ತಲೆ ಹಾಗೂ ದೇಹಕ್ಕೆ ತೀವ್ರ ಗಾಯಗಳಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಕಡಬ ತಹಶೀಲ್ದಾರ್ ಗಣೇಶ್ ಸವಣೂರ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದುರಂತ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







Comments