ಇಂದೋರ್‌ನಲ್ಲಿ ಭೀಕರ ಘಟನೆ: ಇನ್ಫೋಸಿಸ್ ಮಹಿಳಾ ಇಂಜಿನಿಯರ್ ಕಾರಿನಿಂದ ಹೊಡೆದು ಕೊಲೆ

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ಘಟನೆಯಲ್ಲಿ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ಶಾಂಪಾ ಪಾಠಕ್ ಪಾಂಡೆ (Shampa Pathak Pandey) ಅವರು ಕಾರು ಹರಿದು ಸಾವನ್ನಪ್ಪಿದ್ದಾರೆ.
ಲಸೂಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಶಿವ ವಾಟಿಕಾ ಸಮೃದ್ಧಿ ಎಂಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ ಸುಮಾರು 10:30ರ ವೇಳೆ ಈ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್ ನಿವಾಸಿಗಳು ಮತ್ತು ಪೆಂಟ್‌ಹೌಸ್ ಮಾಲೀಕ ಕುಲದೀಪ್ ಚೌಧರಿ ಹಾಗೂ ಅವರ 18 ವರ್ಷದ ಮಗ ಮೋಹಿತ್ ಚೌಧರಿ ನಡುವೆ ಗಲಾಟೆ ನಡೆದಿತ್ತು.

ಪೆಂಟ್‌ಹೌಸ್ ಅನ್ನು Airbnb ಮೂಲಕ ಹೊರಗಿನವರಿಗೆ ಬಾಡಿಗೆಗೆ ನೀಡುತ್ತಿರುವುದಕ್ಕೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ತೀವ್ರಗೊಂಡು ಗಲಾಟೆಗೆ ತಿರುಗಿತು.
ಗಲಾಟೆಯ ಮಧ್ಯೆ ಸ್ಥಳದಿಂದ ತೆರಳಲು ಯತ್ನಿಸಿದ ಮೋಹಿತ್ ಚೌಧರಿ, ಕಾರನ್ನು ವೇಗವಾಗಿ ಚಲಾಯಿಸಿ ಜನರ ಗುಂಪಿನೊಳಗೆ ನುಗ್ಗಿಸಿದ್ದಾನೆ. ಈ ವೇಳೆ ಶಾಂಪಾ ಪಾಂಡೆ ಅವರಿಗೆ ಗಂಭೀರವಾಗಿ ಡಿಕ್ಕಿ ಹೊಡೆದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡರು. ಮತ್ತೊಬ್ಬ ಮಹಿಳೆಯೂ ಗಾಯಗೊಂಡಿದ್ದಾರೆ.
ಗಂಭೀರ ಗಾಯಗೊಂಡ ಶಾಂಪಾ ಅವರನ್ನು ತಕ್ಷಣ ಬಾಂಬೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಆರೋಪಿಗಳಾದ ಕುಲದೀಪ್ ಚೌಧರಿ ಮತ್ತು ಅವರ ಪುತ್ರ ಮೋಹಿತ್ ಅವರನ್ನು ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂಪಾ ಪಾಂಡೆ ಅವರು ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಇಂದೋರ್‌ನಲ್ಲಿ ವಾಸವಾಗಿದ್ದು, ಇತ್ತೀಚೆಗಷ್ಟೇ ಈ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಂಡಿದ್ದರು.







Comments