ಇಂದಿರಾ ಗಾಂಧಿ ಹೆಸರಲ್ಲಿ ನಕಲಿ ಪೋಸ್ಟರ್ ವೈರಲ್: 'ದಿ ಹಿಂದೂ' ಪತ್ರಿಕೆ ಸ್ಪಷ್ಟನೆ

ಚಿನ್ನ ಖರೀದಿಸಬೇಡಿ, ರಾಷ್ಟ್ರೀಯ ಶಿಸ್ತಿಗಾಗಿ ಕರೆ" ಎಂಬ ಶೀರ್ಷಿಕೆಯಡಿ 1967ರ ಜೂನ್ 6ರ ‘ದಿ ಹಿಂದೂ’ ಪತ್ರಿಕೆಯ ಮುಖಪುಟವೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್ ಸಂಪೂರ್ಣ ನಕಲಿ ಎಂದು ಪತ್ರಿಕಾ ಸಂಸ್ಥೆ ಸ್ಪಷ್ಟಪಡಿಸಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಅಂತಹ ಯಾವುದೇ ಮನವಿ ಮಾಡಿಲ್ಲ ಮತ್ತು ಈ ಚಿತ್ರವು ಡಿಜಿಟಲ್ ರೂಪದಲ್ಲಿ ಮಾರ್ಪಡಿಸಲಾದ ಸುಳ್ಳು ಸುದ್ದಿಯಾಗಿದೆ ಎಂದು ಪತ್ರಿಕೆ ಎಚ್ಚರಿಸಿದೆ.
ಬಿಜೆಪಿ ನಾಯಕರು ಪ್ರಧಾನಿ ಮೋದಿ ಅವರ ಇತ್ತೀಚಿನ ನಡೆಯನ್ನು ಸಮರ್ಥಿಸಿಕೊಳ್ಳಲು ಈ ನಕಲಿ ಪೋಸ್ಟರ್ ಹಂಚಿಕೊಂಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಾಸ್ತವವಾಗಿ, 1962ರ ಯುದ್ಧದ ಸಮಯದಲ್ಲಿ ಜವಹರಲಾಲ್ ನೆಹರೂ ಅವರು ರಕ್ಷಣಾ ನಿಧಿಗೆ ದೇಣಿಗೆ ನೀಡಲು ಮನವಿ ಮಾಡಿದ್ದರು. ಆದರೆ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಚಿನ್ನ ಖರೀದಿ ನಿಲ್ಲಿಸುವಂತೆ ಅಧಿಕೃತ ಘೋಷಣೆ ಮಾಡಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ವರದಿಯಾಗಿದೆ.
ಪ್ರಸ್ತುತ ಜಾಗತಿಕ ತೈಲ ಬಿಕ್ಕಟ್ಟು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ವಿನಿಮಯ ಉಳಿಸಲು ಒಂದು ವರ್ಷ ಚಿನ್ನ ಖರೀದಿಸದಂತೆ ಜನರಲ್ಲಿ ಮನವಿ ಮಾಡಿದ್ದಾರೆ. ತೈಲ ಮತ್ತು ಚಿನ್ನದ ಆಮದು ವೆಚ್ಚವನ್ನು ತಗ್ಗಿಸಿ ಆರ್ಥಿಕತೆಯನ್ನು ಸ್ಥಿರಗೊಳಿಸಲು ಈ ಕಠಿಣ ಕ್ರಮದ ಅಗತ್ಯವಿದೆ ಎಂದು ಅವರು ಒತ್ತಿಹೇಳಿದ್ದಾರೆ.







Comments