ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 250 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ

ಆಗಸ್ಟ್ 24ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ
ನವದೆಹಲಿ: ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB) ಜೆಎಂಜಿಎಸ್-I (JMGS-I – Scale I) ಕೇಡರ್‌ನಲ್ಲಿರುವ ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer – LBO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 250 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆಗಸ್ಟ್ 24, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಯಲ್ಲಿ ತಮಿಳುನಾಡಿನಲ್ಲಿ 100 ಹುದ್ದೆಗಳು, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ತಲಾ 50 ಹುದ್ದೆಗಳು ಲಭ್ಯವಿವೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದು, ಆಯ್ಕೆಯಾದವರಿಗೆ ಸಂಬಂಧಿತ ರಾಜ್ಯದಲ್ಲಿಯೇ ನಿಯೋಜನೆ ನೀಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಜೊತೆಗೆ, ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು ಹಾಗೂ ಮಾತನಾಡಲು ಪ್ರಾವೀಣ್ಯತೆ ಹೊಂದಿರುವುದು ಕಡ್ಡಾಯವಾಗಿದೆ.
10 ಅಥವಾ 12ನೇ ತರಗತಿಯಲ್ಲಿ ಸಂಬಂಧಿತ ಸ್ಥಳೀಯ ಭಾಷೆಯನ್ನು ಅಭ್ಯಾಸ ಮಾಡದ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT) ನಡೆಸಲಾಗುತ್ತದೆ.
ವಯೋಮಿತಿ
ಆಗಸ್ಟ್ 1, 2026ರ ಅನ್ವಯ 20ರಿಂದ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಂದರೆ, ಆಗಸ್ಟ್ 2, 1996ರಿಂದ ಆಗಸ್ಟ್ 1, 2006ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸರ್ಕಾರದ ಮೀಸಲಾತಿ ನಿಯಮಗಳ ಅನ್ವಯ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ದೊರೆಯಲಿದೆ.
ಅರ್ಜಿ ಶುಲ್ಕ
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ₹850 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ ಹಾಗೂ ದಿವ್ಯಾಂಗ ಅಭ್ಯರ್ಥಿಗಳು ₹175 ಶುಲ್ಕ ಪಾವತಿಸಬೇಕು. ಅರ್ಜಿ ಹಾಗೂ ಶುಲ್ಕ ಪಾವತಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆಯು ಆನ್‌ಲೈನ್ ಲಿಖಿತ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ ಮತ್ತು ಅಗತ್ಯವಿದ್ದಲ್ಲಿ ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ ಒಳಗೊಂಡಿರುತ್ತದೆ. ಅಂತಿಮ ಆಯ್ಕೆಯಲ್ಲಿ ಆನ್‌ಲೈನ್ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಕ್ರಮವಾಗಿ 80:20ರಷ್ಟು ಅಂಕಗಳ ತೂಕ ನೀಡಲಾಗುತ್ತದೆ.
ಆನ್‌ಲೈನ್ ಪರೀಕ್ಷೆಯು 200 ಅಂಕಗಳಿಗೆ 140 ಪ್ರಶ್ನೆಗಳನ್ನು ಒಳಗೊಂಡಿದ್ದು, ಪರೀಕ್ಷಾ ಅವಧಿ 3 ಗಂಟೆಗಳಾಗಿದೆ. ತಪ್ಪು ಉತ್ತರಗಳಿಗೆ 0.25 ಅಂಕಗಳ ನಕಾರಾತ್ಮಕ ಅಂಕ ಪದ್ಧತಿ ಅನ್ವಯವಾಗಲಿದೆ.
ಪರೀಕ್ಷೆಯಲ್ಲಿ ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್‌ಗೆ 30 ಪ್ರಶ್ನೆಗಳಿಗೆ 60 ಅಂಕ, ಜನರಲ್/ಎಕಾನಮಿ/ಬ್ಯಾಂಕಿಂಗ್ ಅವೇರ್‌ನೆಸ್‌ಗೆ 40 ಪ್ರಶ್ನೆಗಳಿಗೆ 40 ಅಂಕ, ಡೇಟಾ ಅನಾಲಿಸಿಸ್ ಮತ್ತು ಇಂಟರ್ಪ್ರಿಟೇಷನ್‌ಗೆ 30 ಪ್ರಶ್ನೆಗಳಿಗೆ 60 ಅಂಕ ಹಾಗೂ ಇಂಗ್ಲಿಷ್ ಭಾಷೆಗೆ 40 ಪ್ರಶ್ನೆಗಳಿಗೆ 40 ಅಂಕ ನಿಗದಿಪಡಿಸಲಾಗಿದೆ.
ವೇತನ ಮತ್ತು ಸೌಲಭ್ಯ
ಆಯ್ಕೆಯಾದ ಅಭ್ಯರ್ಥಿಗಳಿಗೆ ₹48,480ರಿಂದ ₹85,920ರವರೆಗೆ ಮೂಲ ವೇತನ ದೊರೆಯಲಿದೆ. ಇದರೊಂದಿಗೆ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಸೇರಿದಂತೆ ವಿವಿಧ ಸೌಲಭ್ಯಗಳು ಮತ್ತು ಭತ್ಯೆಗಳು ಲಭ್ಯವಾಗಲಿವೆ.
ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಅಧಿಕೃತ ನೇಮಕಾತಿ ಅಧಿಸೂಚನೆಯಲ್ಲಿ ಅರ್ಹತೆ, ದಾಖಲೆಗಳು, ಪರೀಕ್ಷಾ ನಿಯಮಗಳು ಹಾಗೂ ಇತರ ಷರತ್ತುಗಳನ್ನು ಪರಿಶೀಲಿಸುವುದು ಅಗತ್ಯ.







Comments