ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಕೆ: ವದಂತಿ ನಂಬದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ
- Jun 14
- 1 min read

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಯಲಿವೆ, ಸಾರ್ವಜನಿಕರು ಹಾಗೂ ಫಲಾನುಭವಿಗಳು ಯಾವುದೇ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಚರ್ಚೆಗಳು ಆರಂಭವಾದ ಬೆನ್ನಲ್ಲೇ, "ಗ್ಯಾರಂಟಿ ಇದೆ, ಗ್ಯಾರಂಟಿ ಇರುತ್ತದೆ. ಯಾವುದೇ ಕಾರಣಕ್ಕೂ ಯೋಜನೆಗಳನ್ನು ನಿಲ್ಲಿಸುವುದಿಲ್ಲ" ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಾದ ‘ಗೃಹಲಕ್ಷ್ಮಿ’ ಮತ್ತು ‘ಗೃಹಜ್ಯೋತಿ’ಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಸುಳ್ಳು ಪ್ರಚಾರ ಹಾಗೂ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ಕೆಲವರು ಮೃತಪಟ್ಟವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಯೋಜನೆಗಳ ದುರುಪಯೋಗ ಮಾಡಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಜವಾದ ಫಲಾನುಭವಿಗಳ ಹೆಸರು, ವಿಳಾಸ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ದೃಢೀಕರಿಸಲು ಮಾತ್ರ ಮರುಪರಿಶೀಲನೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಇದು ಯೋಜನೆಗಳನ್ನು ನಿಲ್ಲಿಸುವ ಕ್ರಮವಲ್ಲ, ಬದಲಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ಮಾಡಲು ಹಮ್ಮಿಕೊಂಡಿರುವ ಪಾರದರ್ಶಕ ಕ್ರಮವಾಗಿದೆ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದ್ದಾರೆ.







Comments