ಸರ್ಕಾರಿ ಕಾಲೇಜುಗಳಲ್ಲಿ 50 ಎಐ ಲ್ಯಾಬ್ ಸ್ಥಾಪನೆಗೆ ಸರ್ಕಾರದ ಒಪ್ಪಿಗೆ

ಗ್ರಾಮೀಣ ಹಾಗೂ ಹಂತ-2 ಮತ್ತು ಹಂತ-3 ನಗರಗಳ ವಿದ್ಯಾರ್ಥಿಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳ ಪರಿಚಯ ಮಾಡಿಸಲು ಮತ್ತು ಅವರ ಉದ್ಯೋಗಾವಕಾಶ ಹೆಚ್ಚಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು 50 ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯಗಳ ಸ್ಥಾಪನೆಗೆ ಅಧಿಕೃತ ಅನುಮೋದನೆ ನೀಡಲಾಗಿದೆ.
ಈ ಅತ್ಯಾಧುನಿಕ ಪ್ರಯೋಗಾಲಯಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ, ಹೊಸ ಪ್ರಯೋಗಗಳು ಮತ್ತು ಕೌಶಲ್ಯಾಭಿವೃದ್ಧಿಗೆ ಭದ್ರವಾದ ಮೂಲಸೌಕರ್ಯ ಒದಗಿಸಲಿವೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಿತವಾದ ಈ ಯೋಜನೆಯನ್ನು ಕೇಂದ್ರ ಸರ್ಕಾರದ ‘ಎಐ ಮಿಷನ್’ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಪ್ರತಿ ಪ್ರಯೋಗಾಲಯಕ್ಕೆ ಮೂರು ವರ್ಷಗಳಲ್ಲಿ ಒಟ್ಟು 68.98 ಲಕ್ಷ ರೂಪಾಯಿ ಆರ್ಥಿಕ ನೆರವು ಸಿಗಲಿದ್ದು, ರಾಜ್ಯ ಸರ್ಕಾರವು ತನ್ನ ಪಾಲಿನ 10 ಕೋಟಿ ರೂಪಾಯಿಗಳಲ್ಲಿ 6.29 ಕೋಟಿ ರೂಪಾಯಿಗಳನ್ನು ಮೊದಲ ವರ್ಷದಲ್ಲೇ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ. ಮೊದಲ ಹಂತವಾಗಿ ರಾಜ್ಯದ 23 ಶೈಕ್ಷಣಿಕ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.







Comments