ಬಂಗಾರ, ಬೆಳ್ಳಿ ಬೆಲೆ ದಿಢೀರ್ ಏರಿಕೆ: ಆಮದು ಸುಂಕ ಶೇ. 15ಕ್ಕೆ ಹೆಚ್ಚಿಸಿದ ಕೇಂದ್ರ ಸರ್ಕಾರ
- May 13
- 1 min read

ಕೇಂದ್ರ ಸರ್ಕಾರವು ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಮೇಲಿನ ಆಮದು ಸುಂಕವನ್ನು ಶೇ. 15ಕ್ಕೆ ಹೆಚ್ಚಿಸಿದ್ದು, ಈ ಹೊಸ ದರಗಳು ಇಂದು ಮೇ 13, 2026 ರಿಂದಲೇ ಜಾರಿಗೆ ಬಂದಿವೆ. ಜಾಗತಿಕ ಸಂಘರ್ಷ ಹಾಗೂ ವಿದೇಶಿ ವಿನಿಮಯ ಮೀಸಲು ಮೇಲಿನ ಒತ್ತಡದ ಹಿನ್ನೆಲೆಯಲ್ಲಿ ಆರ್ಥಿಕ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.
ಸುಂಕ ಏರಿಕೆಯ ಬೆನ್ನಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೇರಿವೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬಂಗಾರದ ಬೆಲೆ 10 ಗ್ರಾಂಗೆ ₹1,62,648 ತಲುಪಿದ್ದರೆ, ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ₹2,95,805 ಕ್ಕೆ ಜಿಗಿದು ಹೂಡಿಕೆದಾರರನ್ನು ಬೆರಗುಗೊಳಿಸಿದೆ.
ಹಬ್ಬ ಹಾಗೂ ಮದುವೆ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ದರ ಏರಿಕೆಯು ಜನಸಾಮಾನ್ಯರಿಗೆ ದೊಡ್ಡ ಹೊರೆಯಾಗಲಿದೆ. ಚೀನಾದ ನಂತರ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಚಿನ್ನದ ಆಮದುದಾರ ರಾಷ್ಟ್ರವಾಗಿದ್ದು, ಈ ಬದಲಾವಣೆಯು ಆಭರಣ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಲಿದೆ.







Comments