ಫಿಫಾ ವಿಶ್ವಕಪ್‌ಗೆ ಇಂದು ಚಾಲನೆ: ಚಾಂಪಿಯನ್ ತಂಡಕ್ಕೆ ಸಿಗಲಿದೆ ₹476 ಕೋಟಿ ಬಹುಮಾನ!

ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡಾಕೂಟ 23ನೇ ಆವೃತ್ತಿಯ ಫಿಫಾ ಪುರುಷರ ಫುಟ್‌ಬಾಲ್ ವಿಶ್ವಕಪ್‌ಗೆ ಇಂದು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದಲ್ಲಿ ಜಂಟಿಯಾಗಿ ಚಾಲನೆ ದೊರೆಯಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ 48 ತಂಡಗಳು ಭಾಗವಹಿಸುತ್ತಿರುವ ಈ ಬೃಹತ್ ಟೂರ್ನಿಯಲ್ಲಿ ಫೈನಲ್ ಒಳಗೊಂಡಂತೆ ಒಟ್ಟು 140 ಪಂದ್ಯಗಳು ನಡೆಯಲಿವೆ. ಮೆಕ್ಸಿಕೋ ಸಿಟಿಯ ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.
ಈ ಬಾರಿಯ ವಿಶ್ವಕಪ್‌ನಲ್ಲಿ ನಿಖರ ನಿರ್ಧಾರಗಳಿಗಾಗಿ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಮೈದಾನದ ವಿವಿಧ ಕೋನಗಳಲ್ಲಿ ಅಳವಡಿಸಲಾಗಿರುವ ಎಐ ಕ್ಯಾಮೆರಾಗಳು ಚೆಂಡು ಗೋಲಿನ ಗೆರೆ ದಾಟುವಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ರೆಫ್ರಿಗಳಿಗೆ ತಕ್ಷಣ ಮಾಹಿತಿ ನೀಡಲಿವೆ. ಅಲ್ಲದೆ, ಪೆನಾಲ್ಟಿ ಹಾಗೂ ರೆಡ್ ಕಾರ್ಡ್‌ಗಳನ್ನು ನಿರ್ಣಯಿಸುವ ವಿಎಆರ್ (VAR) ತಂತ್ರಜ್ಞಾನದಲ್ಲೂ ಎಐ ಪ್ರಮುಖ ಪಾತ್ರ ವಹಿಸಲಿದೆ.
ಇನ್ನು ಟೂರ್ನಿಯ ಒಟ್ಟು ಬಹುಮಾನದ ಮೊತ್ತವನ್ನು ದಾಖಲೆಯ 655 ಮಿಲಿಯನ್‌ಗೆ (ಸುಮಾರು ₹6,240 ಕೋಟಿ) ಹೆಚ್ಚಿಸಲಾಗಿದೆ. ಈ ಬಾರಿ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಚಾಂಪಿಯನ್ ತಂಡಕ್ಕೆ ಬರೋಬ್ಬರಿ 50 ಮಿಲಿಯನ್ ಡಾಲರ್, ಅಂದರೆ ಅಂದಾಜು 476 ಕೋಟಿ ರೂಪಾಯಿ ನಗದು ಬಹುಮಾನ ಸಿಗಲಿದೆ. ಕಳೆದ ಕತಾರ್ ವಿಶ್ವಕಪ್‌ಗೆ ಹೋಲಿಸಿದರೆ ಈ ಬಾರಿಯ ಬಹುಮಾನದ ಮೊತ್ತದಲ್ಲಿ ಭಾರಿ ಏರಿಕೆ ಮಾಡಲಾಗಿದೆ.







Comments