ಡೀಸೆಲ್ ದರ ₹22 ಏರಿಕೆ!
- Mar 20
- 1 min read

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಕೈಗಾರಿಕಾ ಡೀಸೆಲ್ ಬೆಲೆಯನ್ನು ಲೀಟರ್‌ಗೆ ₹87.57 ರಿಂದ ₹109.59 ಕ್ಕೆ ಏರಿಸಿದೆ. ಹಾರ್ಮುಜ್ ಜಲಸಂಧಿ ಮುಚ್ಚುವಿಕೆ ಮತ್ತು ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಹಠಾತ್ ₹22 ರಷ್ಟು ಭಾರಿ ಬೆಲೆ ಏರಿಕೆ ಮಾಡಲಾಗಿದ್ದು, ಇದು ಕೈಗಾರಿಕಾ ವಲಯಕ್ಕೆ ದೊಡ್ಡ ಹೊಡೆತ ನೀಡಿದೆ.

ಕೈಗಾರಿಕಾ ಅಥವಾ ಬೃಹತ್ ಡೀಸೆಲ್ ಅನ್ನು ಸಾಮಾನ್ಯ ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟ ಮಾಡದೆ, ನೇರವಾಗಿ ಕಾರ್ಖಾನೆಗಳು ಮತ್ತು ದೊಡ್ಡ ಕೈಗಾರಿಕಾ ಯೋಜನೆಗಳಿಗೆ ಪೂರೈಸಲಾಗುತ್ತದೆ. ಇದಕ್ಕೆ ಯಾವುದೇ ಸರ್ಕಾರಿ ಸಬ್ಸಿಡಿ ಇರುವುದಿಲ್ಲ. ಸದ್ಯ ವಿದ್ಯುತ್ ಪೆಟ್ರೋಲ್ ಬೆಲೆ ಕೂಡ ₹2 ರಷ್ಟು ಹೆಚ್ಚಳವಾಗಿದ್ದು, ಈಗ ಡೀಸೆಲ್ ಬೆಲೆ ಏರಿಕೆಯು ಸಾರಿಗೆ ಮತ್ತು ವಿದ್ಯುತ್ ಉತ್ಪಾದನಾ ವೆಚ್ಚದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಐಒಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬೆಲೆ ಏರಿಕೆಯಿಂದಾಗಿ ಕಂಪನಿಗಳ ಉತ್ಪಾದನಾ ವೆಚ್ಚ ಹೆಚ್ಚಲಿದ್ದು, ಲಾಭದ ಪ್ರಮಾಣ ಕುಸಿಯುವ ಸಾಧ್ಯತೆಯಿದೆ. ಕೈಗಾರಿಕೆಗಳು ತಮ್ಮ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಉತ್ಪನ್ನಗಳ ಬೆಲೆ ಏರಿಕೆ ಮಾಡುವ ಅನಿವಾರ್ಯತೆ ಎದುರಾಗಬಹುದು, ಇದು ಪರೋಕ್ಷವಾಗಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಸ್ಥಿರವಾಗದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಆರ್ಥಿಕ ಹೊರೆ ಬೀಳುವ ಆತಂಕ ಎದುರಾಗಿದೆ.







Comments