ಧಾರವಾಡದಲ್ಲಿ ಭರ್ಜರಿ ಲೋಕಾಯುಕ್ತ ದಾಳಿ 50 ಲಕ್ಷ ರೂ. ಲಂಚ ಪ್ರಕರಣದಲ್ಲಿ ತಹಶೀಲ್ದಾರ್ ಬಂಧನ

50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ
ಧಾರವಾಡ: ಕೋಟ್ಯಂತರ ರೂಪಾಯಿ ಮೌಲ್ಯದ ಖರಾಬು ಜಮೀನಿನ ದಾಖಲೆ ತಿದ್ದುಪಡಿ ಮಾಡಿಕೊಡುವುದಕ್ಕಾಗಿ 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಧಾರವಾಡ–ಕಲಘಟಗಿ ರಸ್ತೆಯ ಯರಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿರುವ ಒಟ್ಟು 33 ಎಕರೆ ಜಮೀನಿನ ಪೈಕಿ 13 ಎಕರೆ ಖರಾಬು ಜಮೀನಾಗಿತ್ತು ಎನ್ನಲಾಗಿದೆ. ಈ ಜಮೀನಿನ ದಾಖಲೆಗಳನ್ನು ಮಾರ್ಪಡಿಸಿ ಕೊಡಲು ತಹಶೀಲ್ದಾರ್ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಲಾಗಿದೆ. ಅಲ್ಲದೆ, ಇದೇ ಜಮೀನಿನ ಪೈಕಿ ಎರಡು ಎಕರೆ ಜಮೀನಿನ ಮೇಲೆ ಕಣ್ಣಿಟ್ಟಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ಬಾಗಲಕೋಟೆಯ ಮಂಜುನಾಥ ಅರಳಿಕಟ್ಟಿ ಅವರು ಯರಿಕೊಪ್ಪ ಗ್ರಾಮದ ಹದ್ದಿನಲ್ಲಿ ಖರೀದಿಸಿದ್ದ ಜಮೀನಿನ ಖರಾಬು ಪಹಣಿ ಸರಿಪಡಿಸಿಕೊಡುವ ಸಂಬಂಧ ಲಂಚದ ಬೇಡಿಕೆ ಇಡಲಾಗಿತ್ತು ಎನ್ನಲಾಗಿದೆ. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದರು.
ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಡಿವೈಎಸ್‌ಪಿ ರವೀಂದ್ರ ಕುರುಬಗಟ್ಟಿ, ಇನ್ಸ್‌ಪೆಕ್ಟರ್‌ಗಳಾದ ಪ್ರಸಾದ್, ಕರುಣೇಶಗೌಡ, ಪ್ರಸಾದ್ ಪಾನೇಕರ್ ಸೇರಿದಂತೆ ಅಧಿಕಾರಿಗಳ ತಂಡ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿತು. ಕರ್ನಾಟಕ ಕಾಲೇಜು ಆವರಣದಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪೂಜೆಗೆ ಸಿದ್ಧತೆ, ಲಂಚ ಪ್ರಕರಣದಲ್ಲಿ ಬಂಧನ
ತಹಶೀಲ್ದಾರ್ ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿತ್ತು. ಪೂಜೆಯ ಬಳಿಕ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸುಮಾರು ಎರಡು ಸಾವಿರ ಜನರಿಗೆ ಅಡುಗೆ ಸಿದ್ಧಪಡಿಸಲಾಗುತ್ತಿತ್ತು ಎನ್ನಲಾಗಿದೆ. ರಾತ್ರಿಯೇ ಅಡುಗೆ ಮಾಡಲು ಸಿಬ್ಬಂದಿ ಹಾಗೂ ಬಾಣಸಿಗರು ಆಗಮಿಸಿದ್ದರು.
ಇದರ ನಡುವೆಯೇ ತಹಶೀಲ್ದಾರ್ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವುದು ಚರ್ಚೆಗೆ ಗ್ರಾಸವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಲಂಚದ ಬೇಡಿಕೆ, ಜಮೀನು ದಾಖಲೆ ತಿದ್ದುಪಡಿ ಹಾಗೂ ಇತರೆ ಆರೋಪಗಳ ಕುರಿತು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.







Comments