ದಕ್ಷಿಣ ಕನ್ನಡ, ಉಡುಪಿ: ಭೋವಿ ಸಮುದಾಯಕ್ಕೆ ‘ಭೋವಿ ವಡ್ಡರ’ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಮನವಿ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಭೋವಿ ಸಮುದಾಯದವರು ‘ಭೋವಿ ವಡ್ಡರ’ ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸುವಂತೆ ಸಮಾಜದ ಯುವ ಮುಖಂಡ ಪವನ್ ಕುಮಾರ್ ಶಿರ್ವ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಭೋವಿ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ಸಮಸ್ಯೆ ಎದುರಾಗಿತ್ತು. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದ್ದು, ಭೋವಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ‘ಭೋವಿ ವಡ್ಡರ’ ಜಾತಿ ಪ್ರಮಾಣ ಪತ್ರ ನೀಡಲು ಇಲಾಖೆ ಸೂಚನೆ ನೀಡಿದೆ ಎಂದು ಪವನ್ ಕುಮಾರ್ ತಿಳಿಸಿದ್ದಾರೆ.
ಈ ವಿಚಾರವನ್ನು ಸೆಪ್ಟೆಂಬರ್ 18ರಂದು ಸಮಾಜ ಕಲ್ಯಾಣ ಸಚಿವ ಮುನಿಯಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರ ಗಮನಕ್ಕೆ ತರಲಾಗಿತ್ತು. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಅವರ ಸೂಚನೆಯ ಮೇರೆಗೆ ಸಚಿವರು ಈ ವಿಚಾರಕ್ಕೆ ತುರ್ತಾಗಿ ಸ್ಪಂದಿಸಿ ಅಗತ್ಯ ಆದೇಶ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹೀಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಭೋವಿ ಸಮುದಾಯದವರು ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿ ‘ಭೋವಿ ವಡ್ಡರ’ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವಂತೆ ಪವನ್ ಕುಮಾರ್ ಶಿರ್ವ ಮನವಿ ಮಾಡಿದ್ದಾರೆ.







Comments