ದಕ್ಷಿಣ ಕನ್ನಡ: ಆಡಳಿತಕ್ಕೆ ಚುರುಕು ಮುಟ್ಟಿಸಲು 17 ಮಂದಿ ಪಿಡಿಒಗಳ ದಿಢೀರ್ ವರ್ಗಾವಣೆ!

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ಆಡಳಿತಾತ್ಮಕ ಹಿತದೃಷ್ಟಿಯಿಂದ ಒಟ್ಟು 17 ಮಂದಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಿನಾಯಕ್ ಕರ್ಭಾರಿ ನರ್ವಾಡೆ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಹಾಗೂ ಪಂಚಾಯತ್ ಆಡಳಿತಕ್ಕೆ ಮತ್ತಷ್ಟು ಚುರುಕು ಮುಟ್ಟಿಸಲು ಈ ಬೃಹತ್ ವರ್ಗಾವಣೆ ಪ್ರಕ್ರಿಯೆ ನಡೆಸಲಾಗಿದೆ.
ಪ್ರಮುಖ ವರ್ಗಾವಣೆಗಳಲ್ಲಿ, ಭವ್ಯ ಎಂ.ಬಿ. ಅವರನ್ನು ಎಡಮಂಗಲದಿಂದ ಒಳಮೊಗ್ರು ಗ್ರಾ.ಪಂ.ಗೆ, ಸೌಮ್ಯ ಎಂ.ಎಸ್. ಅವರನ್ನು ಬೆಟ್ಟಂಪಾಡಿಯಿಂದ ಕಡೇಶಿವಾಲಯ ಗ್ರಾ.ಪಂ.ಗೆ ಹಾಗೂ ವಿಲೈಡ್ ಲಾರೆನ್ಸ್ ರೋಡ್ರಿಗಸ್ ಅವರನ್ನು ಉಪ್ಪಿನಂಗಡಿಯಿಂದ ಆರ್ಯಾಪು ಗ್ರಾ.ಪಂ.ಗೆ ಸ್ಥಳಾಂತರಿಸಲಾಗಿದೆ. ಇನ್ನು ಆರ್ಯಾಪು ಗ್ರಾ.ಪಂ.ನಲ್ಲಿದ್ದ ನಾಗೇಶ್ ಎಂ. ಅವರನ್ನು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವ್ಯಾಪ್ತಿಯ ಧರ್ಮಸ್ಥಳ ಗ್ರಾಮ ಪಂಚಾಯತ್‌ಗೆ ನಿಯೋಜಿಸಿ ಆದೇಶಿಸಲಾಗಿದೆ.
ವರ್ಗಾವಣೆಗೊಂಡಿರುವ ಎಲ್ಲಾ ಅಧಿಕಾರಿಗಳು ತಕ್ಷಣವೇ ಜಾರಿಗೆ ಬರುವಂತೆ ನಿಯೋಜಿತ ಪಂಚಾಯತ್‌ಗಳಲ್ಲಿ ಅಧಿಕಾರ ವಹಿಸಿಕೊಳ್ಳಲು ಸೂಚಿಸಲಾಗಿದೆ. ಈ ದಿಢೀರ್ ವರ್ಗಾವಣೆಯಿಂದ ಜಿಲ್ಲೆಯ ಗ್ರಾಮ ಪಂಚಾಯತ್ ಮಟ್ಟದ ಸಾರ್ವಜನಿಕ ಸೇವೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಇನ್ನು ಮುಂದೆ ವೇಗವಾಗಿ ನಡೆಯಲಿವೆ ಎಂದು ನಿರೀಕ್ಷಿಸಲಾಗಿದೆ.







Comments