ಐಟಿ ದಾಳಿ ವೇಳೆ ಕಾನ್ಸಿಡೆಂಟ್ ಗ್ರೂಪ್ ಚೇರ್ಮನ್ ದುರಂತ ಸಾವು: ಅಧಿಕಾರಿಗಳು ಶೋಧ ನಡೆಸುತ್ತಿದ್ದಾಗಲೇ ಗುಂಡು ಹಾರಿಸಿಕೊಂಡ ಉದ್ಯಮಿ

ಬೆಂಗಳೂರಿನ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಸಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಅವರು ಶುಕ್ರವಾರದಂದು ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು ನಗರದ ಉದ್ಯಮ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಐಟಿ ಇಲಾಖೆಯ ಸತತ ದಾಳಿಗಳೇ ಈ ಭೀಕರ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಸಿ.ಜೆ. ರಾಯ್ ಅವರ ಒಡೆತನದ ಸಂಸ್ಥೆಗಳ ಮೇಲೆ ಕಳೆದ ಕೆಲವು ಸಮಯದಿಂದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪದೇ ಪದೇ ದಾಳಿ ನಡೆಸುತ್ತಿದ್ದರು. ಇಂದು (ಶುಕ್ರವಾರ) ಕೂಡ ಐಟಿ ಅಧಿಕಾರಿಗಳು ಪರಿಶೀಲನೆಗಾಗಿ ಆಗಮಿಸಿದ್ದ ವೇಳೆ, ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ರಾಯ್ ಅವರು ತಮ್ಮ ಬಳಿಯಿದ್ದ ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಅಶೋಕನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪಿಸ್ತೂಲ್ ವಶಕ್ಕೆ ಪಡೆಯಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲು ಸಿದ್ಧತೆ ನಡೆಸಲಾಗಿದೆ. ಐಟಿ ದಾಳಿಯ ಸಂದರ್ಭದಲ್ಲಿ ನಡೆದ ಈ ಅನಿರೀಕ್ಷಿತ ದುರಂತದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.







Comments