ಹಣಕಾಸು ವೈಷಮ್ಯಕ್ಕೆ ಕಾಂಗ್ರೆಸ್ ಮುಖಂಡನ ಹತ್ಯೆ: ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು!

ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜಾ ಅವರ ಹಾಡಹಗಲಿನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೂವರು ಶಾರ್ಪ್ ಶೂಟರ್‌ಗಳನ್ನು ಬಂಧಿಸಿದ್ದಾರೆ. ಹಣಕಾಸಿನ ವೈಷಮ್ಯದ ಹಿನ್ನೆಲೆಯಲ್ಲಿ ಉತ್ತರ ಭಾರತದ ಸುಪಾರಿ ಕಿಲ್ಲರ್‌ಗಳಿಗೆ ಗುತ್ತಿಗೆ ನೀಡಿ ಈ ಕೊಲೆ ಮಾಡಿಸಲಾಗಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳನ್ನು ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ಬಿಹಾರ ಮೂಲದ ಶಾರ್ಪ್ ಶೂಟರ್‌ಗಳು ಎಂದು ಗುರುತಿಸಲಾಗಿದೆ. ಹತ್ಯೆಯ ನಂತರ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಶಿರೂರು ಗಡಿ ಭಾಗದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಪ್ರಮುಖ ಆರೋಪಿ 'ರಾಜು' ಎಂಬಾತನನ್ನು ಸ್ಥಳ ಮಹಜರು ಹಾಗೂ ವಿಚಾರಣೆಗೆ ಕರೆತರುತ್ತಿದ್ದಾಗ, ಆತ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಕಾಪು ಎಸ್‌ಐ ತೇಜಸ್ವಿ ಅವರು ಸರ್ವೀಸ್ ಪಿಸ್ತೂಲ್‌ನಿಂದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಆರೋಪಿ ರಾಜುನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯ ವೇಳೆ ಗಾಯಗೊಂಡ ಎಸ್‌ಐ ತೇಜಸ್ವಿ ಅವರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಪ್ರಕರಣದಲ್ಲಿ ನಕಲಿ ಗುರುತಿನ ಚೀಟಿಗಳನ್ನು ಹೊಂದಿರುವ ಇತರ ಆರೋಪಿಗಳ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದೆ. ಈ ಕೊಲೆಗೆ ಸುಪಾರಿ ನೀಡಿದ ಅಸಲಿ ಮಾಸ್ಟರ್‌ಮೈಂಡ್ ಯಾರು ಮತ್ತು ಎಷ್ಟು ಹಣದ ಡೀಲ್ ನಡೆದಿತ್ತು ಎಂಬುದರ ಕುರಿತು ಉಡುಪಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.







Comments