ಚೀನಾ-ನೇಪಾಳ ಗಡಿಯಲ್ಲಿ ಭೀಕರ ಭೂಕುಸಿತ: 49 ಭಾರತೀಯರು ಸೇರಿ 546 ಜನ ನಾಪತ್ತೆ, 16 ಸಾವು

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬೆನ್ನಲ್ಲೇ, ಚೀನಾ-ನೇಪಾಳ ಗಡಿಯಲ್ಲಿರುವ ಟಿಬೆಟ್‌ನ ಗೈರಾಂಗ್ ಭೂ ಬಂದರು ಪ್ರದೇಶದಲ್ಲಿ ಭಾರೀ ಭೂಕುಸಿತ ಮತ್ತು ಹಿಮಕುಸಿತ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, 546 ಜನರು ನಾಪತ್ತೆಯಾಗಿದ್ದಾರೆ ಎಂದು ಚೀನಾದ ಪ್ರಾದೇಶಿಕ ಸರ್ಕಾರ ತಿಳಿಸಿದೆ.
ನಾಪತ್ತೆಯಾದವರಲ್ಲಿ 23 ದೇಶಗಳ 261 ವಿದೇಶಿ ಪ್ರಜೆಗಳು ಸೇರಿದ್ದಾರೆ. ಇವರಲ್ಲಿ ಕೈಲಾಸ-ಮಾನಸ ಸರೋವರ ಯಾತ್ರೆಗೆ ತೆರಳಿದ್ದ 49 ಭಾರತೀಯ ಯಾತ್ರಿಕರು ಸೇರಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ನೇಪಾಳದ 104, ಲಾಟ್ವಿಯಾದ 33, ಅಮೆರಿಕದ 18 ಹಾಗೂ ಬ್ರಿಟನ್‌ನ 15 ಪ್ರಜೆಗಳು ನಾಪತ್ತೆಯಾಗಿದ್ದಾರೆ. ಸಂತ್ರಸ್ತರ ಕುಟುಂಬಗಳಿಗಾಗಿ ಚೀನಾ ಸರ್ಕಾರ 24 ಗಂಟೆಗಳ ಎರಡು ಇಂಗ್ಲಿಷ್ ಸಹಾಯವಾಣಿಗಳನ್ನು ಆರಂಭಿಸಿದೆ.
ದುರಂತದ ಗಂಭೀರತೆ ಅರಿತ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ತುರ್ತು ಸಭೆ ನಡೆಸಿ, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಸೂಚಿಸಿದ್ದಾರೆ. ಪ್ರಧಾನಿ ಲಿ ಕಿಯಾಂಗ್ ಅವರು ಗೈರಾಂಗ್‌ಗೆ ಭೇಟಿ ನೀಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ನೇಪಾಳ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರಿಗೆ ಸಂತಾಪ ಸೂಚಿಸಿರುವ ಷಿ ಜಿನ್‌ಪಿಂಗ್, ಗಡಿಯಾಚೆಗಿನ ತುರ್ತು ನೆರವಿಗೆ ಚೀನಾ ಸಿದ್ಧವಿದೆ ಎಂದಿದ್ದಾರೆ.
ಗೈರಾಂಗ್ ಪ್ರದೇಶವು ನೇಪಾಳ-ಟಿಬೆಟ್ ನಡುವಿನ ಪ್ರಮುಖ ವ್ಯಾಪಾರ ಹಾಗೂ ಮಾನಸ ಸರೋವರ ಯಾತ್ರೆಯ ಮಾರ್ಗವಾಗಿದೆ. ಕಡಿದಾದ ಕಣಿವೆಗಳು, ತೀವ್ರ ಚಳಿ ಮತ್ತು ಕೃತಕ ಸರೋವರಗಳು ಒಡೆಯುವ ಭೀತಿಯ ನಡುವೆಯೂ ರಕ್ಷಣಾ ಪಡೆಗಳು ಶೋಧ ಕಾರ್ಯವನ್ನು ಮುಂದುವರಿಸಿವೆ.







Comments