ಬಿಳಿನೆಲೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು

ಕೆಲ ದಿನಗಳ ಹಿಂದೆ ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನಡೆದ ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಬಿಳಿನೆಲೆ ಗ್ರಾಮದ ನಿವಾಸಿಗಳಾದ ಸುನಿಲ್, ಮನೋಜ್ ಮತ್ತು ಮನ್ವಿತ್ ಜಾಮೀನು ಪಡೆದ ಆರೋಪಿಗಳಾಗಿದ್ದಾರೆ.

ಘಟನೆಯ ವಿವರ:
ಜುಲೈ 16ರಂದು ಸಂಜೆ ಸುಮಾರು 7.30ರ ವೇಳೆಗೆ ಬಿಳಿನೆಲೆಯ ಪೌಲ್ಟ್ರಿ ಫಾರ್ಮ್ ಒಂದರ ಹತ್ತಿರ ಅವಿನಾಶ್ ಎಂಬವರು ಸತೀಶ್ ಮತ್ತು ಸುಬ್ರಾಯ ಅವರೊಂದಿಗೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಸುನಿಲ್, ಮನೋಜ್ ಹಾಗೂ ಮನ್ವಿತ್ ಕೆಲಸದ ವಿಚಾರವಾಗಿ ಅವಿನಾಶ್ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಈ ಮಾತು ವಿಕೋಪಕ್ಕೆ ತಿರುಗಿ, ಮನೋಜ್ ಮತ್ತು ಮನ್ವಿತ್ ಮರದ ಕೋಲಿನಿಂದ ಅವಿನಾಶ್ ಅವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತ ಅವಿನಾಶ್ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಾನೂನು ಕ್ರಮ ಮತ್ತು ಜಾಮೀನು:
ಸಂತ್ರಸ್ತರ ದೂರಿನ ಆಧಾರದ ಮೇಲೆ ಕಡಬ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂಗಳು ಸೇರಿದಂತೆ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಂಧನ ಭೀತಿನಲ್ಲಿದ್ದ ಆರೋಪಿಗಳು ಪುತ್ತೂರು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆರೋಪಿಗಳ ಪರವಾಗಿ ಪ್ರಸಿದ್ಧ ವಕೀಲ ಮಹೇಶ್ ಕಜೆ ಅವರು ಸುದೀರ್ಘ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು ಮೂವರೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.







Comments