;
top of page

ಕಟ್ಟುಮಸ್ತಾದ ದೇಹ... ಜಿಮ್ ಟ್ರೈನರ್... ದೊಡ್ಡ ಫ್ರೆಂಡ್ಸ್ ಸರ್ಕಲ್; ಒಂದು ಪದಕ್ಕೆ ಶುರುವಾದ ಕಿರಿಕ್ ಕೊನೆಗೆ ಕೊಲೆಯಲ್ಲಿ ಅಂತ್ಯ!

Oct 6
2 min read

ಬೆಂಗಳೂರು : ಆತನದ್ದು ಕಟ್ಟುಮಸ್ತಾದ ದೇಹ. ಜಿಮ್ ಟ್ರೈನರ್ ಬೇರೆ. ಫ್ರೆಂಡ್ಸ್‌ಗಳ ಸರ್ಕಲ್ ಕೂಡ ದೊಡ್ಡದಾಗಿತ್ತು. ಕ್ಲೋಸ್ ಫ್ರೆಂಡ್ಸ್ ಅಂದ್ಮೇಲೆ ಶಿಷ್ಯ, ಮಚ್ಚ, ಮಗ, ಮಾಮ್ಸ್ ಅನ್ನೋ ಪದಗಳು ಕಾಮನ್.ಆದ್ರೆ...

ಇಲ್ಲೊಂದು ಪದವೇ ದೊಡ್ಡ ಕಿರಿಕ್‌ಗೆ ಕಾರಣವಾಗಿದೆ.

“ಶಿಷ್ಯ” ಅಂತ ಕರೆದಿದ್ದಕ್ಕೆ ಶುರುವಾದ ಗಲಾಟೆ ಕೊನೆಗೆ ಒಬ್ಬ ಯುವಕನ ಪ್ರಾಣವನ್ನೇ ತೆಗೆದುಕೊಂಡಿದೆ.

ಅಷ್ಟಕ್ಕೂ ಆ ರಾತ್ರಿ ಅಲ್ಲಿ ಆಗಿದ್ದೇನು?

ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ...

25 ವರ್ಷದ ನಂದನ್...

ಈ ಫೋಟೋದಲ್ಲಿ ಕಾಣ್ತಿರುವ ಯುವಕನ ಹೆಸರು ನಂದನ್. ವಯಸ್ಸು ಕೇವಲ 25 ವರ್ಷ.

ಇಷ್ಟು ಚಿಕ್ಕ ವಯಸ್ಸಿನಲ್ಲಿ ಜಿಮ್‌ನಲ್ಲಿ ಕೆಲಸ ಮಾಡುತ್ತಾ, ಫಿಟ್ ಆಗಿದ್ದ ನಂದನ್‌ಗೆ ಸ್ನೇಹಿತರ ಬಳಗವೂ ಇತ್ತು. ಆದರೆ ಈಗ...ನಂದನ್ ಬದುಕಿಲ್ಲ.

ಈ ಮಾತು ಕೇಳಿದ್ರೆ ನಿಮಗೂ ಒಂದು ಕ್ಷಣ ಶಾಕ್ ಆಗಬಹುದು.

“ಅಷ್ಟಕ್ಕೂ ಇಷ್ಟು ಫಿಟ್ ಆಗಿದ್ದ ಯುವಕನಿಗೆ ಏನಾಯ್ತು?” ಅನ್ನೋ ಪ್ರಶ್ನೆ ನಿಮ್ಮಲ್ಲೂ ಬರಬಹುದು.

ಆ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದ್ರೆ, ಕಥೆ ಹೋಗಿ ನಿಲ್ಲೋದು ಬೆಂಗಳೂರಿನ ಹೆಬ್ಬಾಳದ ಕೆಂಪಾಪುರದಲ್ಲಿರುವ ಒಂದು ಅಪಾರ್ಟ್‌ಮೆಂಟ್‌ನಲ್ಲಿ.

ಆ್ಯನಿವರ್ಸರಿ ಪಾರ್ಟಿಗೆ ಹೋದ ನಂದನ್

ಸಹಕಾರನಗರದಲ್ಲಿರುವ ಜಿಮ್‌ನಲ್ಲಿ ನಂದನ್ ಕೆಲಸ ಮಾಡುತ್ತಿದ್ದ. ಜಿಮ್‌ನ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿದ ಬಳಿಕ ನಂದನ್ ಸೇರಿದಂತೆ ಕೆಲ ಸಿಬ್ಬಂದಿ ಅನುಷ್ ಎಂಬಾತನ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು ಎನ್ನಲಾಗಿದೆ.

ಆರಂಭದಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು.

ಸ್ನೇಹಿತರು ಸೇರಿದ್ದರು. ಮಾತುಕತೆ ನಡೆಯುತ್ತಿತ್ತು. ಪಾರ್ಟಿ ನಡೆಯುತ್ತಿತ್ತು.

ಆದ್ರೆ ಇದೇ ವೇಳೆ ನಂದನ್ ಮತ್ತೊಬ್ಬ ಜಿಮ್ ಸಿಬ್ಬಂದಿ ವಿಶ್ವನಾಥ್‌ನನ್ನು “ಶಿಷ್ಯ” ಎಂದು ಕರೆದಿದ್ದಾನೆ ಎನ್ನಲಾಗಿದೆ.

ಇಲ್ಲೇ ನೋಡಿ...

ಕಿರಿಕ್ ಶುರುವಾಗಿದ್ದು.“ಶಿಷ್ಯ ಅಂತ ಕರೆಯಬೇಡ!”

ನಂದನ್ ತನ್ನನ್ನು “ಶಿಷ್ಯ” ಎಂದು ಕರೆದಿದ್ದಕ್ಕೆ ವಿಶ್ವನಾಥ್ ಅಸಮಾಧಾನಗೊಂಡಿದ್ದಾನೆ ಎನ್ನಲಾಗಿದೆ.

“ಶಿಷ್ಯ ಅಂತ ಕರೆಯಬೇಡ... ಹೆಸರು ಹೇಳಿ ಕರೆಯು” ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ.

ವಿಷಯ ಅಲ್ಲಿಗೇ ಮುಗಿದಿದ್ದರೆ ನಂದನ್ ಇಂದು ನಮ್ಮ ನಡುವೆ ಇರುತ್ತಿದ್ದ.

ಆದ್ರೆ ಅದೇ ಮಾತು ಮತ್ತೆ ಮತ್ತೆ ಪ್ರಸ್ತಾಪವಾಗಿದೆ.

ಮಾತಿಗೆ ಮಾತು ಬೆಳೆದಿದೆ.

ವಾದ-ವಿವಾದ ಜೋರಾಗಿದೆ.

ನಂತರ ಪರಿಸ್ಥಿತಿ ಕೈಮೀರಿ ಹೋಗಿದೆ.

ವಾಶ್‌ರೂಮ್‌ನೊಳಗೆ ನಡೆದಿದ್ದೇನು?

ಗಲಾಟೆ ಕೊನೆಗೆ ಅಪಾರ್ಟ್‌ಮೆಂಟ್‌ನ ವಾಶ್‌ರೂಮ್‌ವರೆಗೂ ಹೋಗಿದೆ ಎನ್ನಲಾಗಿದೆ.

ಅಲ್ಲಿ ನಂದನ್ ಮೇಲೆ ವಿಶ್ವನಾಥ್ ಸೇರಿದಂತೆ ನಾಲ್ವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹಲ್ಲೆ ವೇಳೆ ವಾಶ್‌ರೂಮ್‌ನಲ್ಲಿದ್ದ ಗಾಜಿನ ವಸ್ತು ಒಡೆದಿದೆ.

ಅದೇ ಗಾಜಿನ ತುಂಡು ನಂದನ್ ತಲೆಗೆ ಚುಚ್ಚಿ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ ಎನ್ನಲಾಗಿದೆ.

ನಂದನ್‌ನ ಸ್ಥಿತಿ ಗಂಭೀರವಾಗುತ್ತಿದ್ದಂತೆ ಆತನನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ...

ವೈದ್ಯರ ಪ್ರಯತ್ನ ಫಲಿಸಲಿಲ್ಲ.

25 ವರ್ಷದ ನಂದನ್ ಕೊನೆಯುಸಿರೆಳೆದ.

ತಾಯಿಯ ಕಣ್ಣಿಗೆ ಬಿದ್ದ ಗಾಯದ ಗುರುತುಗಳು...

ಮಗನ ಸಾವಿನ ಸುದ್ದಿ ತಿಳಿದು ಆಸ್ಪತ್ರೆಗೆ ಓಡಿಬಂದ ನಂದನ್ ತಾಯಿ ಮಂಜುಳಾಗೆ ಅಲ್ಲಿ ಕಂಡ ದೃಶ್ಯ ಮತ್ತಷ್ಟು ಆಘಾತ ತಂದಿದೆ ಎನ್ನಲಾಗಿದೆ.

ಮಗನ ದೇಹದ ಮೇಲೆ ಕಚ್ಚಿದ ಗುರುತುಗಳು ಸೇರಿದಂತೆ ಹಲವು ಗಾಯದ ಗುರುತುಗಳು ಕಂಡುಬಂದಿದ್ದು, ಈ ಬಗ್ಗೆ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಶ್ವನಾಥ್, ವಿಜಯ್, ಶರತ್ ಮತ್ತು ನಿಶಾಂತ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆದರೆ ಪೊಲೀಸರ ಮುಂದೆ ಇನ್ನೂ ಹಲವು ಪ್ರಶ್ನೆಗಳಿವೆ...

ಅಷ್ಟಕ್ಕೂ ಆ ರಾತ್ರಿ ನಿಜವಾಗಿ ಏನಾಯ್ತು?

“ಶಿಷ್ಯ” ಎಂಬ ಒಂದು ಪದದಿಂದಲೇ ಗಲಾಟೆ ಶುರುವಾಯಿತಾ?

ಗಲಾಟೆ ಯಾವ ಹಂತದಲ್ಲಿ ಮಾರಣಾಂತಿಕ ಹಲ್ಲೆಯಾಗಿ ಬದಲಾಯ್ತು?

ವಾಶ್‌ರೂಮ್‌ನೊಳಗೆ ನಂದನ್ ಮೇಲೆ ನಿಜವಾಗಿ ಎಷ್ಟು ಮಂದಿ ಹಲ್ಲೆ ನಡೆಸಿದರು?

ದೇಹದ ಮೇಲಿನ ಕಚ್ಚಿದ ಹಾಗೂ ಇತರೆ ಗಾಯದ ಗುರುತುಗಳು ಹೇಗೆ ಉಂಟಾದವು?

ಮತ್ತು...

ನಂದನ್ ಸಾವಿಗೆ ನಿಖರ ಕಾರಣವೇನು?


ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಅಮೃತಹಳ್ಳಿ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ ಅನುಷ್ ಶೆಟ್ಟಿ, ವಿಶ್ವನಾಥ್ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ನಂದನ್ ಮರಣೋತ್ತರ ಪರೀಕ್ಷೆ ಹಾಗೂ ಇತರ ತನಿಖಾ ವರದಿಗಳಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಒಂದು ಪಾರ್ಟಿ... ಕೆಲವೇ ಗಂಟೆಗಳ ಗಲಾಟೆ... ಕೊನೆಗೆ 25 ವರ್ಷದ ಯುವಕನ ಸಾವು. ಆ ರಾತ್ರಿ ನಡೆದ ನಿಜವಾದ ಘಟನೆ ಏನು ಎಂಬುದು ಪೊಲೀಸ್ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page