ಬೆಳ್ತಂಗಡಿ ಖೋಟಾ ನೋಟು ಜಾಲ: ಬಾಡಿಗೆ ಮನೆ ಮೇಲೆ ಪೊಲೀಸ್ ದಾಳಿ

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲಿ ಬೆಳಕಿಗೆ ಬಂದಿದ್ದ ಖೋಟಾ ನೋಟು ಮುದ್ರಣ ಜಾಲದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡವು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ರಸ್ತೆಯಲ್ಲಿರುವ ಆರೋಪಿಗಳ ಬಾಡಿಗೆ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದೆ.

ದಾಳಿಯ ವೇಳೆ ಕೊಠಡಿಯಲ್ಲಿದ್ದ ಎರಡು ಪ್ರಿಂಟರ್‌ಗಳು, ಪೇಂಟ್ ಡಬ್ಬಗಳು ಮತ್ತು ಮುದ್ರಣಕ್ಕೆ ಬಳಸುತ್ತಿದ್ದ ಎ4 ಸೈಜ್ ಪೇಪರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ಅಬ್ದುಲ್ ಶಕೀಲ್ ಹಾಗೂ ಬಂಧಿತ ಸಂದೀಪ್ ಶೋಳಂಬಿ ಈ ಮನೆಯಲ್ಲಿ ವಾಸ್ತವ್ಯವಿದ್ದು, ನೋಟು ಮುದ್ರಣಕ್ಕೆ ತಯಾರಿ ನಡೆಸಿದ್ದರು ಎಂಬುದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ರಾಹಿಂ, ಶರೀಫ್ ಸೇರಿದಂತೆ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬಾರ್‌ಗಳಲ್ಲಿ ನಕಲಿ ನೋಟು ಚಲಾವಣೆಗೆ ಯತ್ನಿಸಿದ್ದು ಹಾಗೂ ಕೇರಳದಿಂದ ಕಾಗದ ಪೂರೈಕೆಯಾಗುತ್ತಿದ್ದ ಬಗ್ಗೆ ತನಿಖೆ ನಡೆಯುತ್ತಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಾಗಿ ಶೋಧ ತೀವ್ರಗೊಳಿಸಲಾಗಿದೆ.







Comments