ಬಂಟ್ವಾಳ: ಕಾರಿಂಜೇಶ್ವರ ಇಳಿಯೂರು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಿಡಿಲು; ಕೋಟ್ಯಾಂತರ ರೂಪಾಯಿ ನಷ್ಟ, ತಪ್ಪಿದ ಪ್ರಾಣಾಪಾಯ!

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನದ ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಪ್ರಾಕಾರಕ್ಕೆ ಭೀಕರ ಸಿಡಿಲು ಬಡಿದಿದೆ. ಸಮುದ್ರ ಮಟ್ಟದಿಂದ ಸುಮಾರು 800 ಅಡಿ ಎತ್ತರದ ಕಡಿದಾದ ಬೆಟ್ಟದ ತುದಿಯಲ್ಲಿರುವ ಈ ಐತಿಹಾಸಿಕ ದೇವಸ್ಥಾನಕ್ಕೆ ಸಂಜೆ ಭಾರಿ ಗಾಳಿ ಮಳೆಯ ನಡುವೆ ಸಿಡಿಲು ಅಪ್ಪಳಿಸಿದೆ.
ಸಿಡಿಲಿನ ತೀವ್ರತೆಗೆ ದೇವಸ್ಥಾನದ ಗರ್ಭಗುಡಿಯ ಮೇಲಿನ ಪ್ರಾಕಾರದ ಶಿಲಾ ಕಲ್ಲುಗಳು ಛಿದ್ರಗೊಂಡು ನೆಲಕ್ಕಪ್ಪಳಿಸಿವೆ. ಕೇವಲ ನಾಲ್ಕು ವರ್ಷಗಳ ಹಿಂದೆಯಷ್ಟೇ ನವೀಕರಣಗೊಂಡು ಬ್ರಹ್ಮಕಲಶೋತ್ಸವ ಕಂಡಿದ್ದ ಈ ದೇವಸ್ಥಾನದ ಗರ್ಭಗುಡಿಗೆ ಈಗ ಭಾರಿ ಹಾನಿಯಾಗಿದ್ದು, ಸುಮಾರು 1 ಕೋಟಿ ರೂಪಾಯಿಯಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ದೇವಸ್ಥಾನವು ಎತ್ತರದ ಗುಡ್ಡದ ಮೇಲಿದ್ದರೂ, ಸಿಡಿಲು ಬಡಿದ ಸಂದರ್ಭದಲ್ಲಿ ಗರ್ಭಗುಡಿ ಹಾಗೂ ಆವರಣದ ಸುತ್ತಮುತ್ತ ಭಕ್ತರಾಗಲಿ, ಸಾರ್ವಜನಿಕರಾಗಲಿ ಯಾರೂ ಇಲ್ಲದ ಕಾರಣ ದೊಡ್ಡ ಪ್ರಾಣಾಪಾಯವೊಂದು ತಪ್ಪಿದೆ. ದೇವರ ಗುಡಿಯ ಪುನರ್ ನವೀಕರಣಕ್ಕೆ ಮತ್ತೆ ಕೋಟ್ಯಾಂತರ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಲಾಗುತ್ತಿದೆ.







Comments