ಅಯೋಧ್ಯೆ ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರ ಹರಿಹರದಲ್ಲಿ ಬಂಧನ!

ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬಂಧನಕ್ಕೊಳಪಟ್ಟಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸುಹೇಲ್ (20), ತನಿಖೆ ವೇಳೆ ದಿಗಿಲುಗೊಳಿಸುವ ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾನೆ. ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ತಾನು ಸಂಚು ರೂಪಿಸಿದ್ದಾಗಿ ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತನಿಖಾಧಿಕಾರಿಗಳು ಈತನ ಮೊಬೈಲ್ ಪರಿಶೀಲಿಸಿದಾಗ ಪಾಕಿಸ್ತಾನದ ಕಂಟ್ರಿ ಕೋಡ್ ಹೊಂದಿರುವ ಹಲವು ವಾಟ್ಸಾಪ್ ಗ್ರೂಪ್‌ಗಳು ಹಾಗೂ ಮಾರಕಾಸ್ತ್ರಗಳನ್ನು ಹಿಡಿದಿರುವ ಚಿತ್ರಗಳು ಪತ್ತೆಯಾಗಿವೆ. ವಿಶೇಷವಾಗಿ ಪಾಕಿಸ್ತಾನದ ಮೊಬೈಲ್ ಸಂಖ್ಯೆಯೊಂದು 'ರಾಣಾ ಬಾಯ್' ಎಂಬ ಹೆಸರಿನಲ್ಲಿ ಸೇವ್ ಆಗಿರುವುದು ಪತ್ತೆಯಾಗಿದ್ದು, ಗಡಿಯಾಚೆಗಿನ ಲಿಂಕ್ ಇರುವುದನ್ನು ಪುಷ್ಟೀಕರಿಸಿದೆ.
ಭಾರತದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಭಾರಿ ಸಾವು-ನೋವು ಸೃಷ್ಟಿಸಲು ಈತನ ತಂಡ ಸಂಚು ರೂಪಿಸಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಸದ್ಯ ಶಂಕಿತ ಉಗ್ರನನ್ನು ಹೆಚ್ಚಿನ ವಿಚಾರಣೆ ಮತ್ತು ತನಿಖೆಗಾಗಿ ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.







Comments