ಅಸ್ತ್ರ ಲಕ್ಕಿ ಸ್ಕೀಮ್ ದಂದೆ: ಕೋಟ್ಯಂತರ ರೂಪಾಯಿ ವಂಚಿಸಿ ಲಂಚುಲಾಲ್ ನಾಪತ್ತೆ!

ಜನರ ಕಣ್ಣಿಗೆ ಮಣ್ಣೆರಚಿ ಹಣ ಗಳಿಸುತ್ತಿದ್ದ 'ಅಸ್ತ್ರ' ಸಂಸ್ಥೆಯ ಮಾಲೀಕ ಲಂಚುಲಾಲ್ ಕೊನೆಗೂ ವಂಚನೆ ಎಸಗಿ ನಾಪತ್ತೆಯಾಗಿದ್ದಾನೆ. ಮಂಗಳೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಸುಮಾರು 50 ಸಾವಿರಕ್ಕೂ ಹೆಚ್ಚು ಜನರಿಂದ ಲಕ್ಕಿ ಸ್ಟೀಮ್ ಹಾಗೂ ಕುರಿ ಫಂಡ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದ ಈತ, ಈಗ ಗ್ರಾಹಕರಿಗೆ ಹಣ ಹಿಂತಿರುಗಿಸದೇ ಪರಾರಿಯಾಗಿದ್ದಾನೆ. ಬ್ಯಾಂಕ್ ಖಾತೆ ಫ್ರೀಜ್ ಆಗಿದೆ ಎಂದು ಏಜಂಟರನ್ನು ನಂಬಿಸುತ್ತಿದ್ದ ಈತ, ಪ್ರಸ್ತುತ ದುಬೈಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಇಂದು ಮಂಗಳೂರಿನ ನವಭಾರತ್ ಸರ್ಕಲ್‌ನಲ್ಲಿರುವ ಅಸ್ತ್ರ ಗ್ರೂಪ್ ಕಚೇರಿಗೆ ನೂರಾರು ವಂಚಿತ ಗ್ರಾಹಕರು ದಾಳಿ ಇಟ್ಟು ತೀವ್ರ ತಳೆದು ಗಲಾಟೆ ನಡೆಸಿದ್ದಾರೆ. ಕಳೆದ ಮೂರು-ನಾಲ್ಕು ವರ್ಷಗಳಿಂದ ಮೂರು ಸೀಸನ್‌ಗಳಲ್ಲಿ ತಿಂಗಳಿಗೆ ಸಾವಿರಾರು ರೂಪಾಯಿ ಕಂತು ಕಟ್ಟಿದರೂ, ಕೊನೆಗೆ ಒಂದು ರೂಪಾಯಿಯೂ ಸಿಗದೆ ಮೋಸ ಹೋಗಿದ್ದೇವೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಜುವೆಲ್ಲರಿ ಮತ್ತು ಬಂಗಾರದ ಬಳೆಗಳ ಪ್ರದರ್ಶನ ಮಾಡುತ್ತಿದ್ದ ಲಂಚುಲಾಲ್, ತನ್ನ ಶೋರೂಂನಲ್ಲಿದ್ದ ವಸ್ತುಗಳನ್ನೂ ಖಾಲಿ ಮಾಡಿಕೊಂಡು ಜಾಗ ಖಾಲಿ ಮಾಡಿದ್ದಾನೆ.
ಜನರ ಹಣದಲ್ಲಿ ತುಳು ಸಿನಿಮಾ ನಿರ್ಮಾಣ, ಅಪಾರ್ಟ್‌ಮೆಂಟ್ ನಿರ್ಮಾಣ ಹಾಗೂ ಐಷಾರಾಮಿ ಜೀವನ ನಡೆಸುತ್ತಿದ್ದ ಲಂಚುಲಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಾಧಿತರು ಆಗ್ರಹಿಸಿದ್ದಾರೆ. ಈ ಹಿಂದೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿ 5 ಕೋಟಿ ರೂಪಾಯಿ ಬಾಂಡ್ ನೀಡಿದ್ದಾಗಿ ಹೇಳಲಾಗುತ್ತಿದ್ದರೂ, 50 ಸಾವಿರ ಗ್ರಾಹಕರ ನಷ್ಟಕ್ಕೆ ಈ ಮೊತ್ತ ಯಾವುದಕ್ಕೂ ಸಾಲದಾಗಿದೆ. ಕೇವಲ ದೂರು ಬಂದಿಲ್ಲವೆಂಬ ಕಾರಣಕ್ಕೆ ಸೂಕ್ತ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ ಹಾಗೂ ಐಟಿ, ಇಡಿ ಅಧಿಕಾರಿಗಳ ನಿರ್ಲಕ್ಷ್ಯವೇ ಇಷ್ಟೊಂದು ದೊಡ್ಡ ಮಟ್ಟದ ಅಕ್ರಮಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.







Comments