ಇರಾನ್ ತೈಲ ಸಂಗ್ರಹಣಾ ಕೇಂದ್ರಗಳ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ: ಶರಣಾದ ಇರಾನ್?

ದಕ್ಷಿಣ ಟೆಹ್ರಾನ್‌ನಲ್ಲಿರುವ ಇರಾನ್‌ನ ಪ್ರಮುಖ ತೈಲ ಸಂಗ್ರಹಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿವೆ. ಈ ದಾಳಿಯಿಂದಾಗಿ ನಗರದಾದ್ಯಂತ ಭಾರಿ ಬೆಂಕಿ ಮತ್ತು ಹೊಗೆ ಆವರಿಸಿದ್ದು, ಅಲ್ಬೋರ್ಜ್ ಪ್ರಾಂತ್ಯದ ಕರಾಜ್ ನಗರದಲ್ಲಿಯೂ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಅದೃಷ್ಟವಶಾತ್, ಹತ್ತಿರದ ತೈಲ ಸಂಸ್ಕರಣಾಗಾರಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಈ ದಾಳಿಯು ಇರಾನ್‌ನ ಇಂಧನ ಮೂಲಸೌಕರ್ಯಕ್ಕೆ ಭಾರಿ ಹೊಡೆತ ನೀಡಿದೆ ಎಂದು ಇಸ್ರೇಲ್ ಸೇನೆ ದೃಢಪಡಿಸಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧವು ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ, ಇರಾನ್ ಈಗ ಸಂಪೂರ್ಣವಾಗಿ ಸೋತ ದೇಶವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇರಾನ್ ಇನ್ಮುಂದೆ ಈ ಭಾಗದ ಬೆದರಿಸುವ ರಾಷ್ಟ್ರವಾಗಿ ಉಳಿದಿಲ್ಲ ಮತ್ತು ಯುದ್ಧದ ತೀವ್ರತೆಯಿಂದಾಗಿ ಅದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ನ ನಿರಂತರ ಸೈನಿಕ ಕಾರ್ಯಾಚರಣೆಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ದಾಳಿಗಳ ತೀವ್ರತೆಗೆ ಮಣಿದಿರುವ ಇರಾನ್, ತನ್ನ ನೆರೆಹೊರೆಯ ರಾಷ್ಟ್ರಗಳ ಬಳಿ ಕ್ಷಮೆಯಾಚಿಸಿದ್ದು, ಇನ್ಮುಂದೆ ಯಾರ ಮೇಲೆಯೂ ದಾಳಿ ನಡೆಸುವುದಿಲ್ಲ ಎಂದು ಶರಣಾಗತಿಯ ಭರವಸೆ ನೀಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸದಲ್ಲಿ ಇರಾನ್ ಮೊದಲ ಬಾರಿಗೆ ಇಂತಹ ಹೀನಾಯ ಸೋಲನ್ನು ಅನುಭವಿಸುತ್ತಿದೆ. ಈ ಮೂಲಕ ಮಧ್ಯಪ್ರಾಚ್ಯವನ್ನು ಆಳುವ ಇರಾನ್ ಸಂಚು ವಿಫಲವಾಗಿದ್ದು, ನೆರೆರಾಷ್ಟ್ರಗಳು ಅಮೆರಿಕದ ಈ ಕ್ರಮಕ್ಕೆ ಧನ್ಯವಾದ ಅರ್ಪಿಸಿವೆ ಎಂದು ಅವರು ಹೇಳಿದ್ದಾರೆ.







Comments