ಅಮೆರಿಕ-ಇರಾನ್ ನಡುವೆ ಶಾಂತಿ ಒಪ್ಪಂದ: 108 ದಿನಗಳ ಸಂಘರ್ಷಕ್ಕೆ ಮುಕ್ತಿ

ಜಾಗತಿಕ ಆರ್ಥಿಕತೆ ಮತ್ತು ತೈಲ ಮಾರುಕಟ್ಟೆಯಲ್ಲಿ ತೀವ್ರ ಆತಂಕ ಮೂಡಿಸಿದ್ದ ಅಮೆರಿಕ ಹಾಗೂ ಇರಾನ್ ನಡುವಿನ 108 ದಿನಗಳ ಸುದೀರ್ಘ ಸಂಘರ್ಷ ಕೊನೆಗೂ ಅಂತ್ಯಗೊಂಡಿದೆ. ಉಭಯ ರಾಷ್ಟ್ರಗಳು ಒಟ್ಟು 14 ಪ್ರಮುಖ ಅಂಶಗಳ ಆಧಾರದ ಮೇಲೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಜೂನ್ 19ರಂದು ಸ್ವಿಟ್ಚರ್ಲೆಂಡ್‌ನಲ್ಲಿ ಈ ಒಪ್ಪಂದದ ಅಧಿಕೃತ ಸಹಿ ಸಮಾರಂಭ ನಡೆಯಲಿದ್ದು, ಜಗತ್ತಿಗೆ ತೈಲ ಬಿಕ್ಕಟ್ಟಿನ ಭೀತಿಯಿಂದ ಮುಕ್ತಿ ಸಿಕ್ಕಂತಾಗಿದೆ.
ಈ ಮಹತ್ವದ ಬೆಳವಣಿಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರೂತ್ ಸೋಷಿಯಲ್' ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಇರಾನ್ ಜೊತೆಗಿನ ಒಪ್ಪಂದ ಪೂರ್ಣಗೊಂಡಿದೆ ಎಂದು ತಿಳಿಸಿರುವ ಅವರು, ಹಾರ್ಮುಜ್ ಜಲಸಂಧಿಯನ್ನು ಟೋಲ್-ಮುಕ್ತವಾಗಿ ಮುಕ್ತಗೊಳಿಸಲು ಮತ್ತು ಅಮೆರಿಕ ನೌಕಾಪಡೆಯ ದಿಗ್ಬಂಧನವನ್ನು ತಕ್ಷಣವೇ ಹಿಂಪಡೆಯಲು ಆದೇಶಿಸಿದ್ದಾರೆ. ಜಾಗತಿಕ ಹಡಗುಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದ್ದು, ತೈಲ ಪೂರೈಕೆ ಸುಗಮವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಒಪ್ಪಂದದ ಅಡಿಯಲ್ಲಿ ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ತಕ್ಷಣದ ಕದನ ವಿರಾಮ ಜಾರಿಗೆ ಬರಲಿದೆ. ಇರಾನ್‌ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರಲು ಅಮೆರಿಕ ಸಮ್ಮತಿಸಿದ್ದು, ಇರಾನ್ ಸುತ್ತಮುತ್ತಲಿನ ಪ್ರದೇಶಗಳಿಂದ ತನ್ನ ಮಿಲಿಟರಿಯನ್ನು ಹಿಂಪಡೆಯಲಿದೆ. ಜೊತೆಗೆ ತೈಲ ನಿರ್ಬಂಧಗಳ ತೆರವು, ಇರಾನ್ ಪುನರ್ನಿರ್ಮಾಣಕ್ಕಾಗಿ 300 ಬಿಲಿಯನ್ ಡಾಲರ್ ನಿಧಿ ಹಾಗೂ ಇರಾನಿನ ಸ್ವತ್ತುಗಳ ಬಿಡುಗಡೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.







Comments