ಆಲಂಕಾರು: ಪತ್ನಿಯ ಕೊಂದು ಪತಿ ಆತ್ಮಹತ್ಯೆ ಶಂಕೆ: ಎರಡು ವರ್ಷದ ಮಗು ಅನಾಥ

ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಬಜಗೋಳಿಯ ದಿನೇಶ್ ಮತ್ತು ಸಿದ್ದಕಟ್ಟೆಯ ಸಂಗೀತ ದಂಪತಿ ಆಲಂಕಾರು ಕಜೆಯ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪತ್ನಿಯನ್ನು ಕೊಲೆ ಮಾಡಿ, ಬಳಿಕ ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಒಂದು ತಿಂಗಳ ಹಿಂದೆ ಹೋಟೆಲ್ ವ್ಯವಹಾರ ಬಿಟ್ಟು ತೆರಳಿದ್ದ ದಂಪತಿ, ಜೂನ್ 19ರ ಸಂಜೆ ಮತ್ತೆ ಬಾಡಿಗೆ ಮನೆಗೆ ಮರಳಿದ್ದರು. ಜೂನ್ 20ರಂದು ಮನೆಯ ಒಳಗಿನಿಂದ ಚಿಲಕ ಹಾಕಿದ ಸ್ಥಿತಿಯಲ್ಲಿ ಇಬ್ಬರ ಸಾವು ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಎರಡು ವರ್ಷದ ಹೆಣ್ಣು ಮಗು ದೃವಿ ಅತ್ತುಕೊಂಡು ನಿದ್ರೆಗೆ ಜಾರಿತ್ತು.
ಮಗುವಿನ ಅಳುವಿನ ಶಬ್ದ ಕೇಳಿ ನೆರೆಹೊರೆಯವರು ಪರಿಶೀಲಿಸಿದಾಗ ಈ ದಾರುಣ ಘಟನೆ ಪತ್ತೆಯಾಗಿದೆ. ಸದ್ಯ ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ. ದಂಪತಿಯ ಸಾವಿನಿಂದಾಗಿ ಎರಡು ವರ್ಷದ ಕಂದಮ್ಮ ಅನಾಥವಾಗಿದೆ.







Comments