ರಾಜ್ಯ ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಹೊಸ ವರ್ಷದ ಉಡುಗೊರೆ: ಜನವರಿ 1ರಿಂದ 'ಋತುಚಕ್ರ ರಜೆ' ಜಾರಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಲ್ಲಿ (KSRTC, BMTC, NWKRTC, ಮತ್ತು KKRTC) ಕಾರ್ಯನಿರ್ವಹಿಸುತ್ತಿರುವ ಮಹಿಳಾ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಮಹಿಳಾ ನೌಕರರ ಆರೋಗ್ಯ ಮತ್ತು ಕಾರ್ಯದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ತಿಂಗಳು ಒಂದು ದಿನದ 'ಋತುಚಕ್ರ ರಜೆ' (Menstrual Leave) ನೀಡುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರು ಈ ಕುರಿತು ಮಂಗಳವಾರ ಅಧಿಕೃತ ಆದೇಶ ಹೊರಡಿಸಿದ್ದು, ಇದು ಜನವರಿ 1, 2026ರಿಂದ ಜಾರಿಗೆ ಬರಲಿದೆ.
ಈ ಸೌಲಭ್ಯವನ್ನು ಪಡೆಯಲು ಸರ್ಕಾರವು ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದೆ. 18 ರಿಂದ 52 ವರ್ಷದೊಳಗಿನ ಋತುಚಕ್ರ ಹೊಂದಿರುವ ಮಹಿಳಾ ನೌಕರರು ಮಾತ್ರ ಈ ರಜೆಗೆ ಅರ್ಹರಾಗಿರುತ್ತಾರೆ. ವಿಶೇಷವೆಂದರೆ, ಈ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿರುವುದಿಲ್ಲ. ಸಾಂದರ್ಭಿಕ ರಜೆ ನೀಡುವ ಸಕ್ಷಮ ಪ್ರಾಧಿಕಾರವೇ ಈ ರಜೆಯನ್ನು ಮಂಜೂರು ಮಾಡಬಹುದಾಗಿದ್ದು, ಹಾಜರಾತಿ ಪುಸ್ತಕದಲ್ಲಿ ಇದನ್ನು ಪ್ರತ್ಯೇಕವಾಗಿ ದಾಖಲಿಸಬೇಕು ಎಂದು ಸೂಚಿಸಲಾಗಿದೆ.
ಮಹಿಳಾ ನೌಕರರ ಮನೋಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಈ ರಜೆಯನ್ನು ಇತರ ಯಾವುದೇ ರಜೆಗಳೊಂದಿಗೆ ಸಂಯೋಜಿಸಲು ಅವಕಾಶವಿಲ್ಲ. ಅಲ್ಲದೆ, ಆಯಾ ತಿಂಗಳ ರಜೆಯನ್ನು ಅದೇ ತಿಂಗಳಿನಲ್ಲಿ ಬಳಸಿಕೊಳ್ಳಬೇಕು; ಅದನ್ನು ಮುಂದಿನ ತಿಂಗಳಿಗೆ ವರ್ಗಾಯಿಸಲು (Carry forward) ಅವಕಾಶ ಇರುವುದಿಲ್ಲ. ಸಾರಿಗೆ ಸಂಸ್ಥೆಯ ಇತಿಹಾಸದಲ್ಲೇ ಮಹಿಳಾ ಸಿಬ್ಬಂದಿಯ ಹಿತದೃಷ್ಟಿಯಿಂದ ಕೈಗೊಂಡಿರುವ ಈ ನಿರ್ಧಾರಕ್ಕೆ ನೌಕರ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.







Comments