ಸಿಗರೇಟಿನ ಬೆಲೆ ಭಾರೀ ಏರಿಕೆ ಸಾಧ್ಯತೆ
- sathyapathanewsplu
- Dec 29, 2025
- 1 min read

ಕೇಂದ್ರ ಸರ್ಕಾರ ಜಾರಿಗೊಳಿಸಿರುವ Central Excise (Amendment) Bill–2025 ದೇಶಾದ್ಯಂತ ತಂಬಾಕು ಬಳಕೆದಾರರಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಹೊಸ ತಿದ್ದುಪಡಿ ಕಾಯ್ದೆಯ ಪರಿಣಾಮವಾಗಿ ಸಿಗರೇಟುಗಳ ಮೇಲಿನ ಉತ್ಪನ್ನ ಶುಲ್ಕ (Excise Duty) ಗಣನೀಯವಾಗಿ ಹೆಚ್ಚಳವಾಗಿದ್ದು, ಇದರ ಪರಿಣಾಮವಾಗಿ ಈಗ ಸುಮಾರು ₹18ಕ್ಕೆ ಲಭ್ಯವಿರುವ ಕೆಲವು ಸಿಗರೇಟುಗಳ ಬೆಲೆ ಮುಂದಿನ ದಿನಗಳಲ್ಲಿ ₹72ರ ತನಕ ಏರಬಹುದು ಎಂಬ ಅಂದಾಜುಗಳು ವ್ಯಕ್ತವಾಗಿವೆ.
ಸರ್ಕಾರದ ನಿರ್ಧಾರವು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ತಂಬಾಕು ಸೇವನೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಹೊಸ ಕಾಯ್ದೆಯಂತೆ, ಸಿಗರೇಟುಗಳ ಮೇಲೆ ವಿಧಿಸಲಾಗುತ್ತಿದ್ದ ಎಕ್ಸೈಸ್ಸ್ ಶುಲ್ಕವನ್ನು ಪ್ರತಿ 1,000 ಸ್ಟಿಕ್‌ಗಳಿಗೆ ಈಗಿನ ₹200–₹735ರಿಂದ ₹2,700ರಿಂದ ₹11,000ರ ವರೆಗೆ ಹೆಚ್ಚಿಸಲಾಗಿದೆ. ಈ ಭಾರೀ ತೆರಿಗೆ ಏರಿಕೆಯ ಹೊರೆ ಕೊನೆಗೆ ಗ್ರಾಹಕರ ಮೇಲೆ ಬಿದ್ದೇ ಬೀಳುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.
ಆರೋಗ್ಯ ತಜ್ಞರ ಪ್ರಕಾರ, ಬೆಲೆ ಏರಿಕೆ ತಂಬಾಕು ಬಳಕೆಯನ್ನು ನಿಯಂತ್ರಿಸಲು ಪರಿಣಾಮಕಾರಿ ಮಾರ್ಗವಾಗಬಹುದು. “ಸಿಗರೇಟಿನ ಬೆಲೆ ಹೆಚ್ಚಿದಷ್ಟು ಅದರ ಬಳಕೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮತ್ತೊಂದೆಡೆ ವ್ಯಾಪಾರಿಗಳು ಹಾಗೂ ತಂಬಾಕು ಉದ್ಯಮಕ್ಕೆ ಸಂಬಂಧಿಸಿದವರು, ಈ ಕ್ರಮದಿಂದ ಅಕ್ರಮ ವ್ಯಾಪಾರ ಹಾಗೂ ಕಳ್ಳ ಸಾಗಣೆ ಹೆಚ್ಚಾಗುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಈ ಕುರಿತು ಸ್ಪಷ್ಟಪಡಿಸಿದ್ದು, ಇದು ತಕ್ಷಣ ಜಾರಿಗೆ ಬರುವ ನಿಖರ ದರ ಅಲ್ಲ. ವಿವಿಧ ಕಂಪನಿಗಳ ಉತ್ಪಾದನಾ ವೆಚ್ಚ, ಮಾರುಕಟ್ಟೆ ನೀತಿ ಹಾಗೂ ರಾಜ್ಯ ತೆರಿಗೆಗಳ ಆಧಾರದಲ್ಲಿ ಅಂತಿಮ ಚಿಲ್ಲರೆ ಬೆಲೆ ನಿರ್ಧಾರವಾಗಲಿದೆ. ಆದರೂ, ತೆರಿಗೆ ಏರಿಕೆಯ ಪರಿಣಾಮವಾಗಿ ಸಿಗರೇಟಿನ ಬೆಲೆಯಲ್ಲಿ ಗಣನೀಯ ಏರಿಕೆ ಅನಿವಾರ್ಯ ಎನ್ನಲಾಗಿದೆ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ನಿರ್ಧಾರವನ್ನು ಸ್ವಾಗತಿಸಿದರೆ, ಇನ್ನೂ ಕೆಲವರು “ಬೆಲೆ ಏರಿಕೆಯಿಂದ ಮಾತ್ರ ವ್ಯಸನ ಕಡಿಮೆಯಾಗುವುದಿಲ್ಲ” ಎಂದು ಸರ್ಕಾರದ ನೀತಿಯನ್ನು ಪ್ರಶ್ನಿಸುತ್ತಿದ್ದಾರೆ.
ಒಟ್ಟಿನಲ್ಲಿ, ಹೊಸ ಎಕ್ಸೈಸ್ಸ್ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ದೇಶದಲ್ಲಿ ತಂಬಾಕು ಉತ್ಪನ್ನಗಳ ಬೆಲೆ ಇತಿಹಾಸದಲ್ಲೇ ಅತಿದೊಡ್ಡ ಏರಿಕೆಯನ್ನು ಕಾಣುವ ಸಾಧ್ಯತೆ ಇದೆ ಎಂಬುದು ಸ್ಪಷ್ಟವಾಗಿದೆ.






Comments