51 ಸಾವಿರ ಯುವಕರಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 51 ಸಾವಿರಕ್ಕೂ ಹೆಚ್ಚು ಯುವಕರಿಗೆ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳ ನೇಮಕಾತಿ ಪತ್ರಗಳನ್ನು ವರ್ಚುವಲ್ ಮೂಲಕ ವಿತರಿಸಿದರು. ರೈಲ್ವೆ, ಬ್ಯಾಂಕಿಂಗ್, ರಕ್ಷಣಾ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆಗಳ ಈ ನೇಮಕಾತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಇತ್ತೀಚಿನ ತಮ್ಮ ಐದು ದೇಶಗಳ ವಿದೇಶಿ ಪ್ರವಾಸದ ಮಹತ್ವವನ್ನು ವಿವರಿಸುವ ಮೂಲಕ ರಾಜಕೀಯ ವಿರೋಧಿಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ತಾವು ಕೇವಲ ವಿದೇಶ ಪ್ರವಾಸ ಮಾಡಿಲ್ಲ, ಬದಲಾಗಿ ಜಾಗತಿಕ ಮಟ್ಟದ ಪ್ರಮುಖ ಕಂಪನಿಗಳ ಮುಖ್ಯಸ್ಥರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾಗಿ ಪ್ರಧಾನಿ ಹೇಳಿದರು. ಇಂದು ಇಡೀ ಜಗತ್ತು ಭಾರತದ ತಾಂತ್ರಿಕ ಪ್ರಗತಿ ಮತ್ತು ಯುವಶಕ್ತಿಯತ್ತ ಅಪಾರ ವಿಶ್ವಾಸದಿಂದ ನೋಡುತ್ತಿದೆ. ಭಾರತೀಯ ಯುವಕರಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಅವಕಾಶಗಳು ಮತ್ತು ಮಾನ್ಯತೆ ದೊರಕಿಸುವುದೇ ತಮ್ಮ ಪ್ರವಾಸಗಳ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.
ಭಾರತವು ವಿಶ್ವದ ಅತ್ಯಂತ ವಿಶ್ವಾಸಾರ್ಹ ‘ಸಪ್ಲೈ ಚೈನ್’ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದು, ಜಾಗತಿಕ ಸೆಮಿಕಂಡಕ್ಟರ್ ದಿಗ್ಗಜ ASML ಕಂಪನಿಯು ಭಾರತದ ಟಾಟಾ ಗ್ರೂಪ್ ಜೊತೆ ಮಾಡಿಕೊಂಡಿರುವ ಒಪ್ಪಂದದಿಂದ ದೇಶದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು. ನೇಮಕಾತಿ ಪತ್ರ ಪಡೆದ ಯುವಕರನ್ನು ಅಭಿನಂದಿಸಿದ ಮೋದಿ, ‘ವಿಕಸಿತ ಭಾರತ’ದ ಕನಸನ್ನು ನನಸು ಮಾಡುವಲ್ಲಿ ಹಸಿರು ತಂತ್ರಜ್ಞಾನ ಸೇರಿದಂತೆ ವಿವಿಧ ವಲಯಗಳಲ್ಲಿ ಭವಿಷ್ಯದಲ್ಲಿ ಅಪಾರ ಉದ್ಯೋಗಾವಕಾಶಗಳು ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.







Comments