ಮಂಗಳೂರು: ವೃದ್ಧೆ ಮನೆಯಲ್ಲಿ ದರೋಡೆ ಪ್ರಕರಣ- ಮೂವರು ಬಂಧನ
- sathyapathanewsplu
- 2 days ago
- 1 min read

ಮಂಗಳೂರು: ಸುರತ್ಕಲ್ ಸಮೀಪದ ಮುಕ್ಕ ಪ್ರದೇಶದಲ್ಲಿ 85 ವರ್ಷದ ವೃದ್ಧೆ ಜಲಜಾ ಅವರ ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ದೋಚಿದ್ದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಡಿಸೆಂಬರ್ 3 ರಂದು ಕುಡಿಯುವ ನೀರು ಕೇಳುವ ನೆಪದಲ್ಲಿ ಬಂದ ಅಪರಿಚಿತರು, ವೃದ್ಧೆಯ ಮನೆ ಹಂಚು ತೆಗೆದು ಒಳನುಗ್ಗಿ, ಬೆದರಿಸಿ ಅವರ ಕುತ್ತಿಗೆಗೆ ಬೈರಾಸು ಬಿಗಿದು ಸುಮಾರು 50 ಗ್ರಾಂ ಚಿನ್ನಾಭರಣ ಮತ್ತು ₹14,000 ನಗದು ದೋಚಿ ಪರಾರಿಯಾಗಿದ್ದರು.
ತನಿಖೆ ನಡೆಸಿದ ಪೊಲೀಸರು, ಶೈನ್ ಎಚ್. ಪುತ್ರನ್ ಅಲಿಯಾಸ್ ಶಯನ್ ಎಂಬಾತನನ್ನು ಮೊದಲು ಬಂಧಿಸಿದರು. ಆತನ ನೀಡಿದ ಮಾಹಿತಿಯ ಮೇರೆಗೆ ಬೆಂಗಳೂರಿಗೆ ತೆರಳಿ ಕಳುವಾದ ಚಿನ್ನ ಖರೀದಿಸಿದ್ದ ವಿನೋದ್ ಅಲಿಯಾಸ್ ಕೋತಿ ಮತ್ತು ಗಿರೀಶ್ ಅಲಿಯಾಸ್ ಸೈಕಲ್ ಗಿರಿ ಎಂಬುವವರನ್ನೂ ವಶಕ್ಕೆ ಪಡೆಯಲಾಗಿದೆ.
ಬಂಧಿತರಿಂದ ಒಟ್ಟು ₹4.43 ಲಕ್ಷ ಮೌಲ್ಯದ ಚಿನ್ನ, ದರೋಡೆಗೆ ಬಳಸಿದ ಮೋಟಾರ್ ಸೈಕಲ್, ಮೂರು ಮೊಬೈಲ್ ಫೋನ್‌ಗಳು ಮತ್ತು ₹3,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಜೈಸನ್ ಅಲಿಯಾಸ್ ಲೆನ್ಸನ್ ಕಾರ್ಕಳ ಇನ್ನೂ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.






Comments