ಬೆಳ್ತಂಗಡಿ: ಅರ್ಚಕನಿಂದ ವಾಮಾಚಾರದ ಹೆಸರಿನಲ್ಲಿ ವಂಚನೆ, ಯುವತಿಗೆ ಕಿರುಕುಳ
- sathyapathanewsplu
- 6 days ago
- 1 min read

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ತುರ್ಕಜೆಯಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ದೇವಾಲಯದ ಅರ್ಚಕನೋರ್ವ ಯುವತಿಯ ಅನಾರೋಗ್ಯಕ್ಕೆ ವಾಮಾಚಾರವೇ ಕಾರಣ ಎಂದು ನಂಬಿಸಿ, ಪರಿಹಾರದ ನೆಪದಲ್ಲಿ ಆಕೆಯ ಕುಟುಂಬದ ವಿಶ್ವಾಸಗಳಿಸಿ, ಬಳಿಕ ಆಕೆಯನ್ನು ತನಗೆ ಕೊಟ್ಟು ಮದುವೆ ಮಾಡಿಕೊಡುವಂತೆ ಪೀಡಿಸಿದ್ದಾನೆ ಎನ್ನಲಾಗಿದೆ. ಮೂಲತಃ ಶಿರಸಿ ಮೂಲದ ಶಿವಗಿರಿ ಎಂಬಾತ ಸ್ಥಳೀಯ ದೇವಾಲಯವೊಂದರಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದನು. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ನರ್ಸಿಂಗ್ ಕಲಿಯುತ್ತಿರುವ ಯುವತಿಯೊಬ್ಬಳು ತನ್ನ ಮನೆಯವರೊಂದಿಗೆ ಹಾಲು ಪಾಯಸದ ಸೇವೆ ಸಲ್ಲಿಸಲು ದೇವಸ್ಥಾನಕ್ಕೆ ಬಂದಾಗ ಈ ಘಟನೆ ನಡೆದಿದೆ. ಯುವತಿಯ ಜಾತಕ ನೋಡಿದ ಅರ್ಚಕ ಶಿವಗಿರಿ, ಆಕೆಗೆ ವಾಮಾಚಾರ ಮಾಡಲಾಗಿದೆ ಎಂದು ಸುಳ್ಳು ಹೇಳಿ, ಪರಿಹಾರಕ್ಕಾಗಿ ಮನೆಯವರಿಂದ ವಸ್ತುಗಳನ್ನು ತರಿಸಿಕೊಂಡು ವಾಮಾಚಾರದ ನೆಪದಲ್ಲಿ ವಿಧಿ ವಿಧಾನಗಳನ್ನು ನಡೆಸಿದ್ದ.
ಮಾಟ-ಮಂತ್ರದ ನೆಪದಲ್ಲಿ ಕುಟುಂಬದವರನ್ನು ನಂಬಿಸಿದ ಅರ್ಚಕ, ನಂತರ ಯುವತಿಯ ಮನೆಯವರಲ್ಲಿ ಆಕೆಯನ್ನು ತನಗೆ ಮದುವೆ ಮಾಡಿಕೊಡುವಂತೆ ಕೇಳಿದ್ದಾನೆ. ತಾವು ಬಿಲ್ಲವ ಸಮುದಾಯದವರು, ಅರ್ಚಕ ಬ್ರಾಹ್ಮಣ ಸಮುದಾಯದವರು ಎಂಬ ಕಾರಣ ನೀಡಿ ಕುಟುಂಬಸ್ಥರು ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಅರ್ಚಕ ಶಿವಗಿರಿ, ಯುವತಿಯಿದ್ದ ಹಾಸ್ಟೆಲ್‌ಗೆ ಹೋಗಿ ವಿಚಾರಿಸುವುದು ಮತ್ತು ಆಕೆಯ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಈ ಕಿರುಕುಳದ ಭಾಗವಾಗಿ ಒಂದು ದಿನ ರಾತ್ರಿ ಯುವತಿಯ ಮನೆಯ ಕೊಟ್ಟಿಗೆಗೆ ಬೆಂಕಿ ಹಚ್ಚಿದ ಆರೋಪವೂ ಈತನ ಮೇಲಿದೆ. ಈ ಕುರಿತು ಯುವತಿಯ ಮನೆಯವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದಾಗ, ಪೊಲೀಸರು ಅರ್ಚಕನನ್ನು ಕರೆಸಿ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದರು. ಅಲ್ಲದೆ, ಮನೆಯವರಿಗೆ ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚಿಸಿದ್ದರು.
ಸಿಸಿ ಕ್ಯಾಮರಾ ಅಳವಡಿಸಿದ ನಂತರ ಮತ್ತೊಂದು ಘಟನೆ ನಡೆದಿದೆ. ಒಂದು ದಿನ ಮಧ್ಯರಾತ್ರಿ ಕೈಯಲ್ಲಿ ತಲವಾರು ಮತ್ತು ಟಾರ್ಚ್ ಲೈಟ್ ಹಿಡಿದು ಆರೋಪಿ ಶಿವಗಿರಿ ಯುವತಿಯ ಮನೆಯ ಹಟ್ಟಿಗೆ ನುಗ್ಗಲು ಯತ್ನಿಸಿದ್ದಾನೆ. ಆದರೆ ಹಟ್ಟಿಯಲ್ಲಿದ್ದ ದನಗಳು ಒಳನುಗ್ಗಲು ಬಿಡದಿದ್ದಾಗ, ಪಕ್ಕದ ಕೋಣೆಗೆ ತೆರಳಿ ಕೆಲ ಸಮಯದ ನಂತರ ವಾಪಾಸಾಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಗ ಯುವತಿಯ ಮನೆಯವರು ಮತ್ತೊಮ್ಮೆ ಪೊಲೀಸರಿಗೆ ದೂರು ನೀಡಿ, ಆತ ವಾಮಾಚಾರ ನಡೆಸಲು ಬಂದಿದ್ದಾನೆ ಮತ್ತು ನಿರಂತರ ಕಿರುಕುಳ ಹಾಗೂ ಕೊಲೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿದ್ದರು. ದೂರು ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಶಿರಸಿಯಲ್ಲಿ ವಶಕ್ಕೆ ಪಡೆದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ನಡುವೆ ವಿಷಯ ತಿಳಿದು ಆತನನ್ನು ದೇವಸ್ಥಾನದ ಕೆಲಸದಿಂದ ತೆಗೆದುಹಾಕಲಾಗಿದೆ. ಸದ್ಯಕ್ಕೆ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ ಎಂದು ವರದಿಯಾಗಿದೆ.






Comments