ಚಲಿಸುವ ಕಾರಿನಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ
- sathyapathanewsplu
- 1 hour ago
- 1 min read

ಲಿಫ್ಟ್ ನೀಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಮಹಿಳೆಯೊಬ್ಬರ ಮೇಲೆ ಚಲಿಸುವ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ ಘೋರ ಘಟನೆ ಪಂತ್ನಗರದಲ್ಲಿ ನಡೆದಿದೆ. ಜನವರಿ 25ರಂದು ಬೆಳಿಗ್ಗೆ ಮಹಿಳೆ ಎಂದಿನಂತೆ ಮನೆಯಿಂದ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಕಾರಿನಲ್ಲಿ ಬಂದ ಇಬ್ಬರು ಆರೋಪಿಗಳು ಲಿಫ್ಟ್ ನೀಡುವುದಾಗಿ ನಂಬಿಸಿ ಆಕೆಯನ್ನು ಕಾರಿಗೆ ಹತ್ತಿಸಿಕೊಂಡಿದ್ದರು. ಮಹಿಳೆ ಕಾರು ಹತ್ತಿದ ಕೂಡಲೇ ಒಬ್ಬ ಆರೋಪಿಯು ಹಿಂದಿನ ಆಸನಕ್ಕೆ ಬಂದು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದು, ಬಳಿಕ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 70(1) ಮತ್ತು 351(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಮಹಿಳೆಯ ಹೇಳಿಕೆ ಮತ್ತು ಸ್ಥಳದಲ್ಲಿ ದೊರೆತ ಪ್ರಾಥಮಿಕ ಪುರಾವೆಗಳ ಆಧಾರದ ಮೇಲೆ ಮಂಗಳವಾರ ಮೊದಲ ಆರೋಪಿಯನ್ನು ಆತನ ಮನೆಯಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ಕಾರನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ತಜ್ಞರು (FSL) ಕಾರಿನಲ್ಲಿದ್ದ ಸಂತ್ರಸ್ತೆಯ ಕೂದಲು ಸೇರಿದಂತೆ ಪ್ರಮುಖ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಈ ಭದ್ರ ಪುರಾವೆಗಳು ಹಾಗೂ ತಾಂತ್ರಿಕ ತನಿಖೆಯ ನೆರವಿನಿಂದ ಪೊಲೀಸರು ಈಗ ಎರಡನೇ ಆರೋಪಿಯನ್ನೂ ಸಹ ಬಂಧಿಸಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ಕಾನೂನು ಪ್ರಕ್ರಿಯೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.






Comments