ಹಿರಿಯ ಸಾರಿಗೆ ಮುಖಂಡ ಅನಂತ್ ಸುಬ್ಬರಾವ್ ನಿಧನ: 'ಬೆಂಗಳೂರು ಚಲೋ' ಮುಂದೂಡಿಕೆ
- sathyapathanewsplu
- 2 hours ago
- 1 min read

ಬೆಂಗಳೂರು: ಸಾರಿಗೆ ನೌಕರರ ಹಿರಿಯ ಮುಖಂಡ ಮತ್ತು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಅನಂತ್ ಸುಬ್ಬರಾವ್ (85) ಅವರು ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಅರಕಲಗೂಡಿನವರಾದ ಸುಬ್ಬರಾವ್ ಅವರು ಕಳೆದ ಐದು ದಶಕಗಳಿಂದ ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರು.
ಅನಂತ್ ಸುಬ್ಬರಾವ್ ಅವರ ನೇತೃತ್ವದಲ್ಲಿಯೇ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಜನವರಿ 29ರಂದು (ಗುರುವಾರ) 'ಬೆಂಗಳೂರು ಚಲೋ' ಪ್ರತಿಭಟನೆಗೆ ಕರೆ ನೀಡಲಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಸಾರಿಗೆ ನೌಕರರು ಈ ಮುಷ್ಕರದಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದರು. ನೌಕರರ ಹಿತಕ್ಕಾಗಿ ಕೊನೆಯವರೆಗೂ ಶ್ರಮಿಸಿದ ಸುಬ್ಬರಾವ್ ಅವರ ನಿಧನವು ಕಾರ್ಮಿಕ ವಲಯದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ.
ಸಾರಿಗೆ ಮುಖಂಡರ ನಿಧನದ ಹಿನ್ನೆಲೆಯಲ್ಲಿ ನಡೆಯಬೇಕಾಗಿದ್ದ ಸಾರಿಗೆ ನೌಕರರ ಮುಷ್ಕರ ಹಾಗೂ 'ಬೆಂಗಳೂರು ಚಲೋ' ಕಾರ್ಯಕ್ರಮವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಇದರಿಂದಾಗಿ ರಾಜ್ಯಾದ್ಯಂತ ಎಂದಿನಂತೆ ಬಸ್ ಸಂಚಾರ ಇರಲಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಾರಿಗೆ ನೌಕರರ ಒಕ್ಕೂಟದ ಮೂಲಗಳು ತಿಳಿಸಿವೆ. ಸುಬ್ಬರಾವ್ ಅವರ ಅಗಲಿಕೆಗೆ ರಾಜ್ಯದ ಗಣ್ಯರು ಹಾಗೂ ಸಾವಿರಾರು ಸಾರಿಗೆ ನೌಕರರು ಕಂಬನಿ ಮಿಡಿದಿದ್ದಾರೆ.






Comments