ಶೀಘ್ರವೇ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಘೋಷಣೆ?
- sathyapathanewsplu
- 2 hours ago
- 1 min read

ಕರಾವಳಿ ಜನರ ದಶಕಗಳ ಕನಸಾದ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ. ಈ ಕುರಿತು ವಿಧಾನಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಪ್ರಶ್ನೆಗೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತುಳು ಭಾಷೆಯ ಐತಿಹಾಸಿಕ ಹಿನ್ನೆಲೆ, ಲಿಪಿ ಮತ್ತು ಸಾಹಿತ್ಯ ಪರಂಪರೆಯ ಕುರಿತು ಅಧ್ಯಯನ ನಡೆಸಲು ರಚಿಸಲಾಗಿದ್ದ ಡಾ. ಮೋಹನ್ ಆಳ್ವ ನೇತೃತ್ವದ ಸಮಿತಿಯು ಈಗಾಗಲೇ 2023ರಲ್ಲೇ ವರದಿ ಸಲ್ಲಿಸಿದೆ. ಈ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ಜಾರಿಗೆ ತರಲು ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಇರುವ ಭಾಷಾ ನೀತಿಗಳನ್ನು ಸರ್ಕಾರ ಪರಿಶೀಲಿಸುತ್ತಿದೆ. ಈಗಾಗಲೇ ಕರ್ನಾಟಕದ ಅಧಿಕಾರಿಗಳ ತಂಡವು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಉರ್ದು ಭಾಷೆಯ ಅಧಿಕೃತ ಸ್ಥಾನಮಾನದ ಕುರಿತು ಅಧ್ಯಯನ ನಡೆಸಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸುಮಾರು 3,000 ವರ್ಷಗಳ ಇತಿಹಾಸ ಹೊಂದಿರುವ ತುಳು ಭಾಷೆಯು ಗೂಗಲ್ ಅನುವಾದದಲ್ಲೂ ಸ್ಥಾನ ಪಡೆದಿದ್ದು, ಅಂತರಾಷ್ಟ್ರೀಯ ಮಟ್ಟದ ಜರ್ಮನಿ ಮತ್ತು ಫ್ರಾನ್ಸ್ ವಿಶ್ವವಿದ್ಯಾಲಯಗಳಲ್ಲಿಯೂ ಅಧ್ಯಯನಕ್ಕೆ ಲಭ್ಯವಿದೆ ಎಂದು ಶಾಸಕ ಅಶೋಕ್ ರೈ ಸದನದ ಗಮನ ಸೆಳೆದರು. ಯಾವುದೇ ಹಣಕಾಸಿನ ಹೊರೆಯಿಲ್ಲದ ಈ ಯೋಜನೆಯನ್ನು ಶೀಘ್ರ ಜಾರಿಗೊಳಿಸುವಂತೆ ಅವರು ಒತ್ತಾಯಿಸಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸರ್ಕಾರವು ತುಳು ಭಾಷಿಕ ಪ್ರದೇಶದ ಎಲ್ಲಾ ಶಾಸಕರನ್ನು ಸಭೆಗೆ ಆಹ್ವಾನಿಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ.






Comments