ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕೆರೆ ಕಂಬಳ: ಮದ್ಯ ಮಾರಾಟ ನಿಷೇದ
- sathyapathanewsplu
- Jan 23
- 1 min read

ಪುತ್ತೂರಿನ ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ 33ನೇ ವರ್ಷದ ‘ಕೋಟಿ-ಚೆನ್ನಯ್ಯ’ ಜೋಡುಕೆರೆ ಕಂಬಳವು ಜನವರಿ 24ರಿಂದ ಅದ್ದೂರಿಯಾಗಿ ಪ್ರಾರಂಭಗೊಳ್ಳಲಿದೆ. ಜನವರಿ 25ರವರೆಗೆ ನಡೆಯಲಿರುವ ಈ ಜಾನಪದ ಕ್ರೀಡಾಕೂಟಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ಹಾಗೂ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಈ ಬೃಹತ್ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪುತ್ತೂರು ನಗರವು ಮತೀಯವಾಗಿ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವುದರಿಂದ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಜಿಲ್ಲಾಡಳಿತದ ಮೊದಲ ಆದ್ಯತೆಯಾಗಿದೆ. ಕಂಬಳದ ಸಮಯದಲ್ಲಿ ಕಿಡಿಗೇಡಿಗಳು ಅಮಲು ಪದಾರ್ಥಗಳನ್ನು ಸೇವಿಸಿ ಸಾರ್ವಜನಿಕರಿಗೆ ಕಿರುಕುಳ ನೀಡುವುದು ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಪೊಲೀಸ್ ಇಲಾಖೆಯು ವಿಶೇಷ ನಿಗಾ ವಹಿಸಿದೆ.
ಶಾಂತಿ ಸುವ್ಯವಸ್ಥೆಯ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು ಪುತ್ತೂರು ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ, ಜನವರಿ 24ರಂದು ಬೆಳಿಗ್ಗೆ 6 ಗಂಟೆಯಿಂದ ಜನವರಿ 25ರ ರಾತ್ರಿ 12 ಗಂಟೆಯವರೆಗೆ ಪುತ್ತೂರು ನಗರದಲ್ಲಿರುವ ಎಲ್ಲಾ ಬಾರ್, ವೈನ್‌ಶಾಪ್ ಹಾಗೂ ಮದ್ಯದ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಬೇಕಿದೆ. ಯಾವುದೇ ರೀತಿಯ ಅಮಲು ಪದಾರ್ಥಗಳ ಮಾರಾಟ ಅಥವಾ ವಿತರಣೆ ಮಾಡದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.






Comments