ಶಕ್ತಿ ಯೋಜನೆ: ಮಹಿಳಾ ಮೀಸಲು ಸೀಟುಗಳ ಬಗ್ಗೆ ಬಸ್ ನಿರ್ವಾಹಕರ ಬೇಜವಾಬ್ದಾರಿ
- sathyapathanewsplu
- Nov 30
- 1 min read

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಶಕ್ತಿ' ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಗ್ಯಾರಂಟಿ ಜಾರಿಗೊಂಡಿದೆ. ಆದರೆ, ಈ ಗ್ಯಾರಂಟಿ ಯೋಜನೆಯು ಬಸ್‌ಗಳಲ್ಲಿನ ಮಹಿಳಾ ಮೀಸಲು ಸೀಟುಗಳ ಹಕ್ಕಿಗೆ ಸಂಚಕಾರ ತಂದಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಇಂದು ಬೆಳಿಗ್ಗೆ ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ (KA.19, F-3196) ಬಸ್‌ನಲ್ಲಿ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ. ಬಸ್ಸಿನಲ್ಲಿ ಆಸನಗಳು ಖಾಲಿ ಇದ್ದರೂ ಸಹ, ಮಹಿಳೆಯರಿಗಾಗಿ ಮೀಸಲಾಗಿದ್ದ ಸೀಟುಗಳಲ್ಲಿ ಪುರುಷ ಪ್ರಯಾಣಿಕರು ಕುಳಿತುಕೊಂಡಿದ್ದರು ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ಪ್ರಶ್ನಿಸಿದ ಮಹಿಳಾ ಪ್ರಯಾಣಿಕರು, ಬಸ್ ನಿರ್ವಾಹಕರ ಗಮನ ಸೆಳೆದು ಮೀಸಲು ಸೀಟಿನಲ್ಲಿ ಕುಳಿತಿದ್ದ ಪುರುಷರನ್ನು ಬೇರೆಡೆಗೆ ಕಳುಹಿಸುವಂತೆ ಸೂಚಿಸಿದಾಗ, ನಿರ್ವಾಹಕರಿಂದ ಅತ್ಯಂತ ಬೇಜವಾಬ್ದಾರಿ ಉತ್ತರ ಬಂದಿದೆ ಎಂದು ಆರೋಪಿಸಿದ್ದಾರೆ. "ಮಹಿಳೆಯರು ರಾಜ್ಯದಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಫ್ರೀ ಬಸ್ ಯೋಜನೆ ಬಂದ ಮೇಲೆ ಮಹಿಳಾ ಮೀಸಲು ಆಸನದ ವ್ಯವಸ್ಥೆ ಇಲ್ಲ. ಖಾಲಿ ಇರುವ ಕಡೆ ಕುಳಿತುಕೊಳ್ಳಿ" ಎಂದು ನಿರ್ವಾಹಕರು ಉಡಾಫೆಯಿಂದ ಉತ್ತರಿಸಿದರು ಎನ್ನಲಾಗಿದೆ. ಮಹಿಳೆ ವಿನಯಪೂರ್ವಕವಾಗಿ ಮನವಿ ಮಾಡಿದಾಗ, ಆ ಪುರುಷ ಪ್ರಯಾಣಿಕನೂ ತಿರಸ್ಕಾರದ ಭಾವದಲ್ಲಿ ಪ್ರತಿಕ್ರಿಯಿಸಿದ್ದಾನೆ. ಇಷ್ಟಾದರೂ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾದ ನಿರ್ವಾಹಕರು, ಪುರುಷ ಪ್ರಯಾಣಿಕನ ಮಾತಿಗೆ ದನಿಗೂಡಿಸಿರುವುದು ಆರೋಪಕ್ಕೆ ಕಾರಣವಾಗಿದೆ.
ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯರ ಸುರಕ್ಷತೆ ಮತ್ತು ಅವರಿಗೆ ಸರ್ಕಾರವೇ ನೀಡಿರುವ ಹಕ್ಕುಗಳನ್ನು ಸಾರ್ವಜನಿಕ ಸಾರಿಗೆಯಲ್ಲಿ ಗೌರವಿಸುವುದು ಅತ್ಯಂತ ಅಗತ್ಯ ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಸರ್ಕಾರದ ಉತ್ತಮ ಯೋಜನೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ, ಅಸ್ತಿತ್ವದಲ್ಲಿರುವ ಮಹಿಳೆಯರ ಹಕ್ಕುಗಳನ್ನು ನಿರ್ಲಕ್ಷಿಸಬಾರದು. ನಿರ್ವಾಹಕನ ಈ ತಾತ್ಸಾರದ ನಡೆಯನ್ನು ಸಾರ್ವಜನಿಕರು ಖಂಡಿಸಿದ್ದು, ಹಿರಿಯ ಅಧಿಕಾರಿಗಳು ಈ ಕುರಿತು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.






Comments