ಪ್ರೇಮ ವೈಫಲ್ಯ: ಒಮಾನ್‌ನಲ್ಲಿ ಉಳ್ಳಾಲ ಮೂಲದ ಯುವಕ ನೇಣಿಗೆ ಶರಣು

ಉಳ್ಳಾಲ ಸಮೀಪದ ಸೋಮೇಶ್ವರ ಮೂಲದ ಯುವಕ ಪುನೀತ್ ಪೂಜಾರಿ (32) ಎಂಬುವವರು ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಒಮಾನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಒಮಾನ್‌ನ ಲಿಫ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು, ಇತ್ತೀಚೆಗಷ್ಟೇ ಊರಿಗೆ ಬಂದು ಮರಳಿದ್ದರು. ತಾವು ಪ್ರೀತಿಸುತ್ತಿದ್ದ ಯುವತಿಯು ಮದುವೆಗೆ ನಿರಾಕರಿಸಿ, ಕರೆ ಹಾಗೂ ಸಂದೇಶಗಳಿಗೆ ಸ್ಪಂದಿಸದ ಕಾರಣ ಮನನೊಂದ ಪುನೀತ್ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ಪುನೀತ್ ತಮ್ಮ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದು, ಈ ದೃಶ್ಯಗಳು ವೈರಲ್ ಆಗಿವೆ. ಮಂಗಳೂರಿನ ಉರ್ವಾ ಮೂಲದ ಯುವತಿಯೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದ ಪುನೀತ್, ಆಕೆ ದೂರವಾದ ನೋವನ್ನು ತಾಳಲಾರದೆ ತಮ್ಮ ಕೊಠಡಿಯಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಮೃತರ ಕುಟುಂಬಸ್ಥರು ಮತ್ತು ಸ್ನೇಹಿತರು ಈ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಸದ್ಯ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದಂತಹ ಬಿಗುವಿನ ವಾತಾವರಣವಿರುವುದರಿಂದ ವಿಮಾನಯಾನ ವ್ಯತ್ಯಯಗೊಂಡಿದೆ. ಇದರಿಂದಾಗಿ ಪುನೀತ್ ಅವರ ಮೃತದೇಹವನ್ನು ಭಾರತಕ್ಕೆ ತರುವ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಸೌಹಾರ್ದ ಸಂಘಟನೆಗಳು ಮತ್ತು ಭಾರತೀಯ ರಾಯಭಾರ ಕಚೇರಿಯು ಕುಟುಂಬದ ನೆರವಿಗೆ ಧಾವಿಸಿದ್ದು, ಮೃತದೇಹವನ್ನು ತಾಯ್ನಾಡಿಗೆ ತರಲು ಪ್ರಯತ್ನ ನಡೆಸುತ್ತಿವೆ.







Comments